ಕಾನೂನು ಬಾಹಿರ ವಾಸಯೋಗ್ಯ ಪ್ರಮಾಣಪತ್ರ ಪ್ರಕರಣ ತನಿಖೆ

ಬಹುಮಹಡಿ ವಸತಿ ಸಂಕೀರ್ಣಗಳಲ್ಲಿ ಕಾನೂನು ಬಾಹಿರವಾಗಿ ವಾಸಯೋಗ್ಯ ಪ್ರಮಾಣ ಪತ್ರ ಪಡೆದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಮಾಹಿತಿ ನೀಡಿದರು
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಮಾಹಿತಿ ನೀಡಿದರು
Updated on: 

ವಿಧಾನಸಭೆ: ಬೆಂಗಳೂರು ಮಹಾನಗರದಲ್ಲಿ ತಲೆ ಎತ್ತಿರುವ ಬಹುಮಹಡಿ ವಸತಿ ಸಂಕೀರ್ಣಗಳಲ್ಲಿ ಕಾನೂನು ಬಾಹಿರವಾಗಿ ವಾಸಯೋಗ್ಯ ಪ್ರಮಾಣ ಪತ್ರ ಪಡೆದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆಡಳಿತ ಪಕ್ಷದ ಹಿರಿಯ ಸದಸ್ಯ ಕೆಆರ್ ರಮೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 15 ಮೀಟರ್ ಎತ್ತರಕ್ಕೆ ಮೇಲ್ಪಟ್ಟ ಕಟ್ಟಡಗಳನ್ನು ಬಹುಮಹಡಿ ವಸತಿ ಸಂಕೀರ್ಣಗಳು ಎಂದು ಪರಿಗಣಿಸಲಾಗುತ್ತದೆ. ಕಳೆದ ಐದು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 9 ಪ್ರಾಧಿಕಾರಗಳಿಂದ ಅವಶ್ಯ ಅನುಮತಿ ಪಡೆದು 97 ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಬಿಡಿಎ ವತಿಯಿಂದ 9 ವಸತಿ ಸಂಕೀರ್ಣಗಳ ನಿರ್ಮಾಣಕ್ಕೆ 2009-10ರಲ್ಲಿ ಒಪ್ಪಿಗೆ ನೀಡಿದ ನಂತರ ಮತ್ತೆ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ನಿಗದಿ ಪಡಿಸಿದ ಅನುಮೋದನೆಗಳನ್ನು ಪಾಲಿಸದೇ ಯಾವುದೇ ಕಟ್ಟಗಳ ನಿರ್ಮಾಣವಾಗಿಲ್ಲ. ಒಂದೊಮ್ಮೆ ಅಂತಹ ಪ್ರಕರಣಗಳು ನಡೆದಿದ್ದರೆ ಸರ್ಕಾರ ತನಿಖೆ ನಡೆಸಲು ಸಿದ್ಧ ಎಂದು ಹೇಳಿದರು.

ಮಂತ್ರಿಯಾಗೋ ಅರ್ಹತೆ ಇದೆ
ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರನ್ನು ಬುದ್ಧಿವಂತ ಎಂದು ಸಿದ್ದರಾಮಯ್ಯ ಕರೆದಾಗ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗಾದರೆ ಅವರ್ಯಾಕೆ ಸಚಿವರಾಗಿಲ್ಲ? ಎಂದು ಕಾಲೆಳೆದರು.

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶೆಟ್ಟರ್ ಅವರೇ, ನನಗಿಂತ ಬುದ್ದಿವಂತರಾದ ಶಾಸಕರು ನಮ್ಮಲ್ಲಿ ಇದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿಲ್ಲ. ನಿಮ್ಮ ಪಕ್ಷದಲ್ಲೂ ಬುದ್ಧಿವಂತರು ಇದ್ದರು. ಆದರೆ ನೀವು ಸಿಎಂ ಆಗಿರಲಿಲ್ಲವಾ? ಹಾಗೆ ಬುದ್ಧಿವಂತಿಕೆಗೂ ಸಚಿವರಾಗುವುದಕ್ಕೆ ಸಂಬಂಧವಿಲ್ಲ. ರಮೇಶ್ ಕುಮಾರ್ ಮಂತ್ರಿಯಾಗಬಹುದು. ಆಗದೆಯೂ ಇರಬಹುದು. ಆದರೆ ಮಂತ್ರಿಯಾಗುವ ಅರ್ಹತೆ ಇದೆ ಎಂದು ಚರ್ಚೆಗೆ ತೆರೆ ಎಳೆಯಲು ಪ್ರಯತ್ನಿಸಿದರು. ಆದರೆ ಬಿಜೆಪಿಯ ಸಿಟಿ ರವಿ ನೀವು ಅವರನ್ನು ಸಚಿವರನ್ನಾಗಿ ಮಾಡಬಹುದು, ಮಾಡದೆಯೂ ಇರಬಹುದು ಎಂದು ಮತ್ತೆ ಕಾಲೆಳೆದರು.

ಬಿಜೆಪಿ ಅವಧಿಯಲ್ಲೇ ಡಿನೋಟಿಫೈ
ರಾಜ್ಯ ಸರ್ಕಾರಕ್ಕೆ ಡಿನೋಟಿಫಿಕೇಶನ್ ಮಾಡುವ ಅಧಿಕಾರವಿದ್ದು, ಕೆಂಪೇಗೌಡ ಬಡಾವಣೆಯ 28 ಎಕರೆ ಭೂಮಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ಡಿನೋಟಿಫೈ ಮಾಡಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಅರವಿಂದ ಲಿಂಬಾವಳಿ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ಕೆಂಪೇಗೌಡ ಬಡಾವಣೆಯಲ್ಲಿ ಯಾವುದೇ ಡಿನೋಟಿಫೈ ಮಾಡಿಲ್ಲ ಎಂದರು.

ಈ ಬಡಾವಣೆಗಾಗಿ ಬಿಡಿಎ ಒಟ್ಟು 4043 ಎಕರೆ 27 ಗುಂಟೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 1976.16 ಎಕರೆ ಜಮೀನನ್ನು ಐತೀರ್ಪಿನ ಮೂಲಕ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. 1307.39 ಎಕರೆ ಭೂಸ್ವಾಧೀನ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. 160 ಎಕರೆಗೆ ಪಹಣಿ ತಾಳೆಯಾಗುತ್ತಿಲ್ಲ. 373.23 ಕರೆ ಸರ್ಕಾರದಿಂದ ಇನಾಂ ರೂಪದಲ್ಲಿ ಮಂಜೂರಾಗಿದೆ. ಆದರೆ ಇದಕ್ಕೆ ಸೂಕ್ತ ದಾಖಲೆಗಳಿಲ್ಲ. 173.26 ಎಕರೆ ಕಂದಾಯ ಇಲಾಖೆಯಿಂದ ಸರ್ಕಾರಕ್ಕೆ ವರ್ಗಾವಣೆಯಾಗುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com