ಪಕ್ಷದಲ್ಲಿದ್ದಾಗ ತೇಜಸ್ವಿನಿ ಮಜಾ ತಗೊಂಡಿದ್ರಾ?

ಮೋಟಮ್ಮ
ಮೋಟಮ್ಮ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯರ ಕುರಿತು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ನೀಡಿದ ಹೇಳಿಕೆಗೆ ಮಾಜಿ ಸಚಿವೆ ಮೋಟಮ್ಮ ಖಾರವಾಗಿ ಪ್ರತಿಕ್ರಿಯಿಸಿದ್ದು, ರಾಜಕೀಯ ಲಾಭ ಪಡೆಯಲು ಅವರು, ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಮಹಿಳೆಯ ಮೇಲಿನ ದೌರ್ಜನ್ಯ, ಮಹಿಳೆ ಮತ್ತು ಮಾಧ್ಯಮ ಕುರಿತು ರಾಜ್ಯ ಮಹಿಳಾ ಆಯೋಗ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ತೇಜಸ್ವಿನಿ ರಮೇಶ್‌ಗೆ ಕಾಂಗ್ರೆಸ್ ಪಕ್ಷವೇನು ಹೊಸದಲ್ಲ. ಅಲ್ಲಿಯೇ ಇದ್ದು ಸಂಸದೆಯೂ ಆಗಿದ್ದರು.

ಆಗ ಇಂತಹ ಹೇಳಿಕೆ ನೀಡಲು ಅವರಿಗೆ ಏನಾಗಿತ್ತು? ಆಗ ಅವರಿಗೆ ಗೊತ್ತಾಗಲಿಲ್ಲವೇ ಅಥವಾ ಗೊತ್ತಿದ್ದು ಸುಮ್ಮನಿದ್ದರಾ? ಎಂದು ತರಾಟೆಗೆ ತೆಗೆದುಕೊಂಡರು. ರಾಜಕೀಯ ಲಾಭ ಪಡೆಯುವುದಕ್ಕಾಗಿಯೇ ಅವರಿಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅಲ್ಲಿ ಆ ಪಕ್ಷದವರನ್ನು ಮೆಚ್ಚಿಸಿ ರಾಜಕೀಯ ಲಾಭ ಪಡೆಯಬೇಕಿದೆ. ಅದಕ್ಕಾಗಿ ಮತ್ತೊಂದು ಪಕ್ಷದ ಮಹಿಳೆಯರ ಗೌರವ, ಸ್ಥಾನಮಾನದ ಬಗ್ಗೆ ಮಾತನಾಡುತ್ತಿದ್ದಾರೆಂದು ತಿರುಗೇಟು ನೀಡಿದರು.

ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ನೀಡಿದಷ್ಟು ಗೌರವ, ಸ್ಥಾನಮಾನ ಯಾವ ಪಕ್ಷದಲ್ಲೂ ಸಿಕ್ಕಿಲ್ಲ. ಅದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದಲೇ ಶುರುವಾಗುತ್ತದೆ. ಪಕ್ಷದ ಇತಿಹಾಸದಲ್ಲಿ ಅವರ ಹಾಗೆ ಅನೇಕ ಮಹಿಳೆ ನಾಯಕಿಯರು ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ.

ಅವರನ್ನು ಪಕ್ಷ ಅಷ್ಟೇ ಗೌರವದಿಂದ ಕಂಡಿದೆ. ಈ ಇತಿಹಾಸ ಅರಿಯದ ತೇಜಸ್ವಿನಿ ರಮೇಶ್, ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಎಚ್ಚರಿಸಿದರು.

ಹೊಗಳಿಕೆಗೆ ಮರುಳಾಗಬೇಡಿ: ಹೆಣ್ಣು ಮಕ್ಕಳಿಗೆ ಅತೀವ ಸೌಂದರ್ಯ ಪ್ರಜ್ಞೆ. ಪುಂಡು ಪೋಕರಿ ಗಂಡು ಮಕ್ಕಳು ಹಾಡಿ ಹೊಗಳಿದರೆ ಉಬ್ಬಿ ಹೊಗುತ್ತಾರೆ. ಜಡೆ ಚೆನ್ನಾಗಿದೆ. ಮುಖ ಚೆನ್ನಾಗಿದೆ ಅಂತೆಲ್ಲಾ ಹೇಳಿಬಿಟ್ಟರೆ ಬಹುಬೇಗ ಮರುಳಾಗಿ ಬಿಡುತ್ತಾರೆ. ಹೀಗಾಗಿಯೇ ಅನೇಕ ಪ್ರಕರಣಗಳಲ್ಲಿ ಮಹಿಳೆ ಶೋಷಣೆಗೆ ಬಲಿಯಾಗುತ್ತಿದ್ದಾಳೆ. ಮಹಿಳೆಯರು ಮೊದಲು ಇದನ್ನು ನಿಲ್ಲಿಸಬೇಕು.

ಸ್ವಯಂ ಪ್ರೇರಿತರಾಗಿ ಅಪರಾಧಗಳಿಗೆ ಸಿಕ್ಕಿಹಾಕಿಕೊಳ್ಳವುದರಿಂದ ದೂರವಾಗ ಬೇಕೆಂದು ಕಿವಿಮಾತು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com