ಬಿಬಿಎಂಪಿ ಚುನಾವಣೆಗೆ ಒತ್ತಾಯಿಸಿ ಬಿಜೆಪಿ ಧರಣಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೋಲುವ ಬೀತಿಯಿಂದ ಬಿಬಿಎಂಪಿ ಚುನಾವಣೆ ನಡೆಸಲು ಧೈರ್ಯವಿಲ್ಲ.
ಬಿಜೆಪಿ
ಬಿಜೆಪಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೋಲುವ ಬೀತಿಯಿಂದ ಬಿಬಿಎಂಪಿ ಚುನಾವಣೆ ನಡೆಸಲು ಧೈರ್ಯವಿಲ್ಲ. ವಿಶೇಷ ಅಧಿವೇಶನ ಕರೆದು ಬಿಬಿಎಂಪಿ ಮೂರು ಭಾಗ ಮಾಡಿ ಚುನಾವಣೆ ಮುಂದೂಡಲು ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ದೂರಿದೆ.

ಜನಾಭಿಪ್ರಾಯಕ್ಕೆ ವಿರುದ್ಧವಾಗಿ, ಪೂರ್ವಾಪರ ಆಲೋಚನೆ ಇಲ್ಲದೆ ಬೆಂಗಳೂರು ನಗರವನ್ನು 3 ಭಾಗವಾಗಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಸುಗ್ರೀವಾಜ್ಞೆ ಮೂಲಕ ಭಾಗ ಮಾಡಲು ಹೊರಟ ಸರ್ಕಾರಕ್ಕೆ ಮುಖಭಂಗವಾಯಿತು. ಹೀಗಾಗಿ ವಿಶೇಷ ಅಧಿವೇಶನ ಕರೆದು ಅತಿರೇಕದ ನಿರ್ಣಯ ಕೈಗೊಂಡಿದೆ ಎಂದು ಮಾಜಿ ಡಿಸಿಎಂ ಆರ್. ಅಶೋಕ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

60 ವರ್ಷದಲ್ಲಿ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಮಾತ್ರ ವಿಶೇಷ ಅಧಿವೇಶನ ಕರೆಯಲಾಗಿತ್ತು. ಅಂದು ರಾಜ್ಯದ ಹಿತ ಕಾಪಾಡುವ ಉದ್ದೇಶ ಇತ್ತು. ಆದರೆ, ಇಂದು ನಗರದ ಹಿತ ಬಲಿಕೊಡುವ ಉದ್ದೇಶದಿಂದ ಅಧಿವೇಶನ ಕರೆದಿದ್ದಾರೆ. ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದ ರೈತರು ಬೆಳೆ ನಷ್ಟದಿಂದ ತತ್ತರಿಸಿದ್ದಾರೆ. ಇದನ್ನು ಚರ್ಚಿಸಲು ಅಧಿವೇಶನ ಕರೆಯುತ್ತಿಲ್ಲ. ಬಿಬಿಎಂಪಿ ಮೂರು ಭಾಗ ಮಾಡಲು ಒಂದು ದಿನದ ಅಧಿವೇಶನ ನಡೆಸಲು ಸರ್ಕಾರ ಕೋಟ್ಯಂತರ ತೆರಿಗೆದಾರರ ಹಣ ಪೋಲು ಮಾಡುತ್ತಿದೆ ಎಂದರು.

ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಒಂದು ದಿನದ ಧರಣಿಯನ್ನು ಬಿಜೆಪಿ ನಡೆಸಲಿದೆ. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಧರಣಿ ನೇತೃತ್ವ ವಹಿಸಲಿದ್ದಾರೆ. ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಅಶೋಕ್ ತಿಳಿಸಿದರು. ಹೈಕೋರ್ಟ್ ಮೇ 31ರೊಳಗೆ ಚುನಾವಣೆ ನಡೆಸಿ ಎಂದು ಆದೇಶಿಸಿದೆ. ರಾಜ್ಯ ಸರ್ಕಾರ ಚುನಾವಣೆ ನಡೆಸಲು ಹಿಂಜರಿಯುತ್ತಿದೆ.

ಹೈಕೋರ್ಟ್ ಆದೇಶದಂತೆ ಚುನಾವಣೆ ಅಧಿಸೂಚನೆಯನ್ನು ಕೂಡಲೇ ಹೊರಡಿಸಬೇಕು ಎಂದು ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಎಸ್. ಮುನಿ ರಾಜು, ನಗರ ಜಿಲ್ಲಾಧ್ಯಕ್ಷ ಸುಬ್ಬಣ್ಣ ಅವರ ನೇತೃತ್ವದ ನಿಯೋಗ ಗುರುವಾರ ಮಧ್ಯಾಹ್ನ ಚುನಾವಣೆ ಆಯೋಗದ ಆಯುಕ್ತ ಶ್ರೀನಿವಾಸಚಾರಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com