ಚುನಾವಣೆ ಉಸ್ತುವಾರಿಗೆ ಆರ್.ಅಶೋಕ ನೇಮಕ; ಜೊತೆಗೆ ನಾನಾ ಸಮಿತಿ ರಚನೆ

ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಬಿಜೆಪಿಯು ತನ್ನ ಮೊದಲ ಪಟ್ಟಿಯನ್ನು ಆಗಸ್ಟ್ 4ರಂದು ಬಿಡುಗಡೆ ಮಾಡಲಿದ್ದು, 5ರಿಂದಲೇ ನಾಮಪತ್ರ
ಆರ್.ಅಶೋಕ
ಆರ್.ಅಶೋಕ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಬಿಜೆಪಿಯು ತನ್ನ ಮೊದಲ ಪಟ್ಟಿಯನ್ನು ಆಗಸ್ಟ್ 4ರಂದು ಬಿಡುಗಡೆ ಮಾಡಲಿದ್ದು, 5ರಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಲು ಉದ್ದೇಶಿಸಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ
ತಿಳಿಸಿದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಶನಿವಾರದಿಂದ ಇಲ್ಲಿಯವರೆಗೆ ವಿವಿಧ ಹಂತದ ಸಭೆ ನಡೆಸಿದ್ದು ಚುನಾವಣೆಗೆ ಸಜ್ಜಾಗಿದ್ದೇವೆ. ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದರು. ಚುನಾವಣೆ ಸಮಿತಿ ಘೋಷಿಸಲಾಗಿದ್ದು, ಈ ಚುನಾವಣೆ ಉಸ್ತುವಾರಿಯಾಗಿ ಆರ್.ಅಶೋಕ ಅವರನ್ನು ನೇಮಿಸಲಾಗಿದೆ. ಇವರ ಜೊತೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ, ಜೊತೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಚುನಾವಣೆಗೆ ಸ್ಪರ್ಧಿಸುವವರ ಕುರಿತು ಮಾರ್ಗಸೂಚಿಯನ್ನು ಪಕ್ಷದ ರಾಜ್ಯ ಘಟಕವು ಸಿದ್ದಪಡಿಸಿತ್ತು, ಅದರನ್ವಯ ಆಯ್ಕೆ ನಡೆಯುತ್ತಿದೆ. ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆದು ಜಿಲ್ಲಾ ಘಟಕಕ್ಕೆ ಅಭ್ಯರ್ಥಿಗಳ ಹೆಸರನ್ನು ಕಳಿಸುತ್ತಾರೆ. ಜಿಲ್ಲಾ ಘಟಕವು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದು, ಚುನಾವಣಾ ಸಮಿತಿಯು ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸುತ್ತದೆ ಎಂದರು. ಆ.4ರಂದು ಸಂಜೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆ.5ರಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ ಎಂದ ಅವರು, ಇಡೀ ಬಿಜೆಪಿ ವಲಯದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಬಿಜೆಪಿ ಹಿಂದಿಗಿಂತ ದೊಡ್ಡ ಪ್ರಮಾಣದಲ್ಲಿ 112 ಸ್ಥಾನಗಳಿಸಿದ್ದೇವೆ. ಅದಕ್ಕಿಂತ ಹೆಚ್ಚು ಗೆಲ್ಲುತ್ತೇವೆ. ಸೋಲಿನ ಭೀತಿಯಿಂದಾಗಿ ಚುನಾವಣೆ ನಿಗದಿತ ಅವಧಿಯಲ್ಲಿ ನಡೆಯಬಾರದೆಂದು ಮುಖ್ಯಮಂತ್ರಿಯವರು ಹರಸಾಹಸ ಮಾಡಿದ್ದರು. ಆದರೆ, ದೇಶ ಮತ್ತು ರಾಜ್ಯ ನ್ಯಾಯಾಂಗ ಅವಕಾಶ ನೀಡಲಿಲ್ಲ. ಇದೀಗ ಚುನಾವಣೆ ಎದುರಿಸುವುದು ಕಾಂಗ್ರೆಸ್‍ಗೆ ಅನಿವಾರ್ಯವಾಗಿದೆ ಎಂದರು.

ಬಿಜೆಪಿಯಲ್ಲೇನು ನಡೆದಿದೆ?
ಸಾಮಾಜಿಕ ತಾಣಗಳಲ್ಲಿ ಚುನಾವಣಾ ಪ್ರಚಾರವನ್ನು ಪರಿಣಾಮಕಾರಿಯಾಗಿ ಮಾಡುವ ದೃಷ್ಟಿಯಿಂದ ಭಾನುವಾರ ಬೆಳಗ್ಗೆ ಸಭೆ ನಡೆಸಲಾಗಿದೆ. ಫೇಸ್ ಬುಕ್, ಟ್ವೀಟರ್, ಬ್ಲಾಗ್, ವೆಬ್‍ಸೈಟ್ ಮೂಲಕ ಪ್ರಚಾರ ನಡೆಸಲು ಸುಮಾರು 100 ಕಾರ್ಯಕರ್ತರುಕಾರ್ಯನಿರ್ವಹಿಸಲಿದ್ದು, ಐಟಿ ಸೆಲ್ ರಚನೆ ಮಾಡಿ ತರಬೇತಿ ನೀಡಲಾಗಿದೆ. ಪ್ರತಿ ವಾರ್ಡಿನಲ್ಲಿ ಸ್ಪರ್ಧಾಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳನ್ನು ವಾರ್ಡ್ ಕೋರ್ ಕಮಿಟಿಯಲ್ಲಿ ಅವಲೋಕಿಸಿ 3-4 ಹೆಸರನ್ನು ಅಂತಿಮಗೊಳಿಸುತ್ತಿದೆ. ನಂತರ ಅದನ್ನು ಮಂಡಲ (ವಿಧಾನಸಭಾ ಘಟಕ)ಕ್ಕೆ ಕಳಿಸುತ್ತದೆ. ಅಲ್ಲಿ ಮತ್ತಷ್ಟು ಸೋಸುವ ಕಾರ್ಯ ನಡೆದು 2-3 ಹೆಸರು ಸೀಮಿತಗೊಳಿಸಲಾಗುತ್ತದೆ. ಈ ವೇಳೆ ಸಂಸದರು, ಶಾಸಕರು, ಕೋರ್ ಕಮಿಟಿ ಸದಸ್ಯರು, ಜಿಲ್ಲಾಧ್ಯಕ್ಷರು ಒಮ್ಮತದಿಂದ ಒಪ್ಪಿದರೆ ಒಂದು ಹೆಸರನ್ನು ಅಖೈರುಗೊಳಿಸಲಾಗುತ್ತದೆ. ಪಕ್ಷಕ್ಕೆ, ಸಮಾಜಕ್ಕೆ ಮತ್ತು ಬಿಬಿಎಂಪಿಗೆ ಆಸ್ತಿಯಾಗುವಂತಹ ವ್ಯಕ್ತಿಗಳಾಗುವಂತಹ ಒಳ್ಳೆಯ ವ್ಯಕ್ತಿತ್ವ ಹೊಂದಿರುವವರು ಆಕಾಂಕ್ಷಿಗಳಾಗಿ ಬಂದರೆ ಅವರನ್ನು ಪರಿಗಣಿಸಲಾಗುತ್ತದೆ. ಅಂತಹವರನ್ನು ಪರಿಗಣಿಸಲು ಪಕ್ಷ ಸೂಚನೆ ನೀಡಿದೆ. ಆ.4ರಂದು ಪಕ್ಷದ ಚುನಾವಣೆ ಸಮಿತಿ ಸಭೆ ನಡೆಯಲಿದೆ, ಅಲ್ಲಿ ಮೊದಲ ಹಂತದಲ್ಲಿ ಅಖೈರುಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಪ್ರಕಟಿಸಲಾಗುತ್ತದೆ. ಬೇರೆ ಬೇರೆ ಶಾಸಕರು, ಪ್ರಮುಖರಿಗೆ ವಿಧಾಸಭಾ ಕ್ಷೇತ್ರದ ಉಸ್ತುವಾರಿ ನೀಡಲು ನಿರ್ಧರಿಸಲಾಗಿದ್ದು, ಸೋಮವಾರ ಉಸ್ತುವಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತದೆ.

ಮತ್ತೆ ನಿದ್ದೆ ಮಾಡ್ತಾರೆ ಸಿದ್ದರಾಮಯ್ಯ
ಇದು ನಿದ್ದೆ ಸರ್ಕಾರ, ಚುನಾವಣೆ ಬಂದಿದೆ ಎಂದು ಸರ್ಕಾರಕ್ಕೆ ಎಚ್ಚರವಾಗಿದೆ. ಎರಡು ವರ್ಷ ಮಲಗಿದ್ದ ಸಿದ್ದರಾಮಯ್ಯ ಮತ್ತೆ ಮಲಗುತ್ತಾರೆ, ಮತ್ತೆ ಯಾವ ಚುನಾವಣೆ ಬಂದರೆ ಆಗ ಏಳುತ್ತಾರೋ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಚುನಾವಣೆ ಉಸ್ತುವಾರಿ ಆರ್.ಅಶೋಕ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ನಿದ್ದೆ ಮಾಡುವ ಮುಖ್ಯಮಂತ್ರಿಯಾಗಿ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com