ಮೊದಲ ಪಟ್ಟಿಗೂ ಕಾಂಗ್ರೆಸ್ ಗಜಪ್ರಸವ

ರೆಸಾರ್ಟ್ ಆಯ್ತು, ಸ್ಟಾರ್ ಹೋಟೆಲ್‍ನಲ್ಲಿ ಸಭೆಯೂ ಮುಗಿತು. ಆದರೆ, ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಾತ್ರ ಇನ್ನೂ ಇಲ್ಲ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on: 

ಬೆಂಗಳೂರು: ರೆಸಾರ್ಟ್ ಆಯ್ತು, ಸ್ಟಾರ್ ಹೋಟೆಲ್‍ನಲ್ಲಿ ಸಭೆಯೂ ಮುಗಿತು. ಆದರೆ, ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಾತ್ರ ಇನ್ನೂ ಇಲ್ಲ. ಗೆಲುವಿನ ಅತಿ ನಿರೀಕ್ಷೆ ಮತ್ತು ಅನಿವಾರ್ಯತೆಯಲ್ಲಿರುವ ಕಾಂಗ್ರೆಸ್‍ನಲ್ಲಿ ಆಂತರಿಕ ತೊಳಲಾಟ ಇನ್ನೂ ಪೂರ್ಣಗೊಂಡಿಲ್ಲ.

ಹೀಗಾಗಿ ಮೊದಲ ಹಂತದ ಪಟ್ಟಿಗೂ ಗಜ ಪ್ರಸವದ ಸ್ಥಿತಿ ಬಂದೊದಗಿದೆ. ಗುರುವಾರ ಮಧ್ಯಾಹ್ನದಿಂದ ಮಧ್ಯ ರಾತ್ರಿವರೆಗೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆದಿದೆಯಾದರೂ ಅಂತಿಮ ಪಟ್ಟಿ ಪ್ರಕಟವಾಗಿಲ್ಲ. ನಗರದ ಹೊರ ವಲಯದ ರೆಸಾರ್ಟ್‍ನಲ್ಲಿ ತಡರಾತ್ರಿವರೆಗೆ ನಡೆದ ಕಸರತ್ತಿನಲ್ಲಿ ಪೂರ್ಣ ಫಲ ಲಭಿಸಿಲ್ಲ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಸುತ್ತಿನ ಸಭೆ ನಡೆದಿದೆ.
ಮುಸ್ಸಂಜೆ ಬಿ ಫಾರ್ಮ್?ಇದುವರೆಗೆ ನಡೆದಿರುವ ಬೆಳವಣಿಗೆ ಪ್ರಕಾರ ಒಬ್ಬನೇ ವ್ಯಕ್ತಿ ಅಂತಿಮವಾಗಿರುವ 50 ವಾರ್ಡ್ ಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸ ಲಾಗಿದೆ. ಶುಕ್ರವಾರ ರಾತ್ರಿ ಇನ್ನೂ 70 ಹೆಸರು ಅಂತಿಮಗೊಂಡಿವೆ. ಇನ್ನೂ 78 ವಾರ್ಡ್ ಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವುದು ಜಟಿಲವಾಗಿದೆ. ಕೆಲವೆಡೆ ಮೂರಕ್ಕೂ ಹೆಚ್ಚು ಹೆಸರಿದ್ದರೆ ಇನ್ನೂ ಕೆಲವಡೆ ಅಭ್ಯರ್ಥಿಗಳೇ ಇಲ್ಲ.  ಹೀಗಾಗಿ ಇಂಥ ಕಡೆಗಳಲ್ಲಿ ಅನ್ಯ ಪಕ್ಷಗಳ ತಂತ್ರವನ್ನು ನೋಡಿ ಮುಂದಿನ ನಡೆ ಇಡಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಹಂತಹಂತವಾಗಿ ಪಟ್ಟಿ ಬಿಡುಗಡೆಯಾದರೆ ಬಂಡಾಯ, ಭಿನ್ನಮತ ಉಲ್ಬಣವಾಗುವ ಸಾಧ್ಯತೆ ಇದೆ. ಹೀಗಾಗಿ ಎರಡು ದಿನ ಅಂತಿಮಗೊಳಿಸಿದ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬಹಿರಂಗವಾಗದಂತೆ ನೋಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ.

ಒಂದು ಪ್ರತಿ ಸಿದ್ದರಾಮಯ್ಯ ಬಳಿ ಹಾಗೂ ಇನ್ನೊಂದು ಪ್ರತಿ ಪರಮೇಶ್ವರ ಅವರ ಬಳಿ ಇರುವುದರಿಂದ ಹೆಸರುಗಳು ಇನ್ನೂ ಬಹಿರಂಗವಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಬಂಡಾಯ ಕಡಿಮೆ ಮಾಡಲು ತಂತ್ರ ನಡೆಸಿರುವ ಕಾಂಗ್ರೆಸ್ ಮುಖಂಡರು 198 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ತಡರಾತ್ರಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಭಾನುವಾರ ಸಾಯಂಕಾಲದ ಹೊತ್ತಿಗೆ ಬಿ ಪಾರ್ಮ್ ವಿತರಣೆ ಮುಕ್ತಾಯಗೊಳಿಸುತ್ತಾರೆ. ಸೋಮವಾರ ನಾಮಪತ್ರ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಚಾರವನ್ನುನಡೆಸಲು ನಿರ್ಧರಿಸಲಾಗಿದೆ.

ವಕ್ತಾರರಿಗೆ ಹೆಚ್ಚಿನ ಹೊರೆ

ಚುನಾವಣಾ ಉದ್ದೇಶದಿಂದ ಕಾಂಗ್ರೆಸ್ ನಿಯೋಜನೆ ಮಾಡಿರುವ 16 ವಕ್ತಾರರಿಗೆ ಈ ಬಾರಿ ಹೆಚ್ಚಿ ಹೊರೆ ಇದೆ. ಮಾಧ್ಯಮಗಳಲ್ಲಿ ಬಿಜೆಪಿ ಆಡಳಿತಾವಧಿಯ ಹಗರಣಗಳನ್ನುಸಮರ್ಥವಾಗಿ ಬಿಂಬಿಸುವುದರ ಜತೆಗೆ ಬಹಿರಂಗ ಸಭೆಗಳಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಈ ವಕ್ತಾರರಿಗೆ ಮತ್ತೊಂದು ಸುತ್ತಿನ ಸೂಚನೆ ನೀಡಲಾಗಿದೆ. ಪ್ರಣಾಳಿಕೆಯಷ್ಟೇ ಪರಿಣಾಮಕಾರಿಯಾಗಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಚುನಾವಣಾ ಚಾರ್ಜ್ ಶೀಟ್ ಸಲ್ಲಿಸಲು ವಕ್ತಾರರು ಸಿದ್ಧತೆ ನಡೆಸಿದ್ದಾರೆ.

ಅಲ್ಲಲ್ಲಿ ಕಿರು ಬಂಡಾಯ ಇಷ್ಟೆಲ್ಲದರ ಮಧ್ಯೆಯೇ ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಆರಂಭವಾಗಿದೆ. ಸುಭಾಷ್‍ನಗರ ವಾರ್ಡ್ ನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲೇಶ್, ಅವಕಾಶ ಸಿಗದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಗೆ ಅವಕಾಶ ತಪ್ಪಿಸುತ್ತಿದ್ದಾರೆ ಎಂದು ಮಲ್ಲೇಶ್ ಆರೋಪಿಸಿದ್ದಾರೆ.

ಜೆಡಿಎಸ್‍ನತ್ತ ವಲಸೆ ತಪ್ಪಿಸಲು ಪಟ್ಟಿ ವಿಳಂಬ
ಕಾಂಗ್ರೆಸ್‍ನ ಉನ್ನತ ಮೂಲಗಳ ಪ್ರಕಾರ ಶನಿವಾರ ಸಾಯಂಕಾಲ ನಡೆದ ಸಭೆಯಲ್ಲಿ 150 ವಾರ್ಡ್‍ಗಳ ಅಭ್ಯರ್ಥಿ ಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ, ಪಟ್ಟಿ ಪ್ರಕಟ ಮಾಡಿದರೆ ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ. ಇದರಿಂದ ಪಕ್ಷದ ಮತಗಳು ಬೇರೆಡೆ ಸ್ಥಳಾಂತರಗೊಳ್ಳುತ್ತವೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ವಿಳಂಬ ಮಾಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com