

ಬೆಂಗಳೂರು: ಬಿಬಿಎಂಪಿ ಚುನಾವಣಾ ಫಲಿತಾಂಶ ರಾಜ್ಯ ಸರ್ಕಾರದ ವಿರುದ್ಧದ ಜನಾದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸರ್ಕಾರದ ಪರ ವಿರುದ್ಧದ ಜನಾದೇಶವಲ್ಲ.
ಬಿಬಿಎಂಪಿ, ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶಗಳನ್ನು ಈ ರೀತಿ ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ನಾವು ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಹೀಗಾಗಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಚುನಾವಣೆಯ ಸೋಲುಗೆಲುವಿಗೆ ನಾನು, ಉಸ್ತುವಾರಿ ಸಚಿವರು ಎಲ್ಲರೂ ಜವಾಬ್ದಾರರೇ ಎಂದು ಹೇಳಿದರು. ನಾವು ಬೆಂಗಳೂರನ್ನು ವಿಭಜನೆ ಮಾಡುತ್ತಿಲ್ಲ.
ಬಿಬಿಎಂಪಿಯನ್ನು ಆಡಳಿತಾತ್ಮಕವಾಗಿ ವಿಭಜಿಸುತ್ತೇವೆ. ಈ ಬಗ್ಗೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರೂ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ನಾವು ಈ ಪ್ರಕ್ರಿಯೆ ಆರಂಭಿಸಿದ ನಂತರ ಈಗ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಚುನಾವಣೆ ಬಳಿಕ ರಾಷ್ಟ್ರಪತಿಗಳು ಬಿಬಿಎಂಪಿ ವಿಭಜನೆಗೆ ಒಪ್ಪಿಗೆ ನೀಡಿದರೆ ಮೂರು ಭಾಗ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ.
ಸಹಿ ಆಗಿ ಬಂದ ಮೇಲೆ ಆ ಬಗ್ಗೆ ಯೋಚನೆ ಮಾಡೋಣ. ಆ ಬಳಿಕ ಕಾನೂನು ತಜ್ಞರಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳೋಣ ಎಂದರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರೌಡಿ ಶೀಟರ್ ಗಳು, ಅಪರಾಧ ಹಿನ್ನೆಲೆಯವರು ಇಲ್ಲ. ಆರೋಪ ಇದ್ದ ಮಾತ್ರಕ್ಕೆ, ಯಾರೋ ಕೇಸ್ ಹಾಕಿದ್ದಾರೆ ಎಂದಾಕ್ಷಣ ಅವರನ್ನು ಅಪರಾಧಿ ಎನ್ನಲು ಸಾಧ್ಯವೇ? ಈಗ ಕುಮಾರಸ್ವಾಮಿ, ಯಡಿಯೂರಪ್ಪ ವಿರುದ್ಧ ಸಾಕಷ್ಟು ದೂರುಗಳಿವೆ. ಅವರೆಲ್ಲ ಅಪರಾಧಿಗಳಾ? ಯಡಿಯೂರಪ್ಪ ವಿರುದ್ಧ ಮೊನ್ನೆ ಮೊನ್ನೆ 14 ಕೇಸ್ ದಾಖಲಾಗಿದೆ. ಆದರೂ ಅವರು ಸಂಸತ್ ಸದಸ್ಯರಾಗಿಲ್ಲವೇ? ಎಂದು ವ್ಯಂಗ್ಯವಾಡಿದರು.