
ಬೆಂಗಳೂರು: ದೇಶಾದ್ಯಂತ ಮಹಿಳಾ ಪ್ರಾತಿನಿಧ್ಯ ಕುರಿತು ಚರ್ಚೆಗೆ ಈ ಬಾರಿ ಬಿಬಿಎಂಪಿ ಚುನಾವಣಾ ಫಲಿತಾಂಶ ಹೊಸ ದಿಕ್ಕು ನೀಡಿದೆ. ಈ ಬಾರಿ ಬಿಬಿಎಂಪಿಯಲ್ಲಿ ಪ್ರಮೀಳಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಕರ್ನಾಟಕ ರಾಜಕಾರಣದಲ್ಲಿ ಇದು ಹೊಸ ಹೆಜ್ಜೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ ಸಾಧಿತವಾಗಿದೆ ಎಂಬುದಕ್ಕೆ ಈ ಸಲದ ಬಿಬಿಎಂಪಿಯೇ ಸಾಕ್ಷಿ. ಪ್ರತಿ ಚುನಾವಣೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಶೇ.50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿಲ್ಲಧವಾದರೂ, ಬಿಬಿಎಂಪಿಯ ಅರ್ಧದಷ್ಟು ಸದಸ್ಯರಾಗಿ ಮಹಿಳೆಯರೇ ಆಯ್ಕೆಯಾಗಿದ್ದಾರೆ.
ವಿವಿಧ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಈ ಬಾರಿ ಒಟ್ಟು 100 ಮಹಿಳೆಯರು ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಪೊಲೀಸ್ ಪೇದೆ ಆಗಿ, ಕರ್ತವ್ಯಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸವಿತಾ ಶ್ರೀನಗರದಿಂದ ಜಯಭೇರಿ ಭಾರಿಸಿದ್ದಾರೆ.
ಪುರುಷ ಅಭ್ಯರ್ಥಿಗಳ ವಿರುದ್ಧ ಮಾಜಿ ಮೇಯರ್ ಶಾಂತಕುಮಾರಿ ಸಹಮತ್ತೆ ಗೆಲುವು ಸಾಧಿಸಿದ್ದಾರೆ. ಇಬ್ಬರು ಪಕ್ಷೇತರರು, ಉಳಿದಂತೆ ಬಹುತೇಕ ಮಾಜಿ ಪಾಲಿಕೆ ಸದಸ್ಯರ ಪತ್ನಿಯರು ವಿಜಯ ಸಾಧಿಸಿದ್ದು, ಇವರ ಜತೆಗೆ ಸಾಕಷ್ಟು ಮಂದಿ ಹೊಸ ಮುಖಗಳಿವೆ.
ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ನೆಲೆಯಲ್ಲಿ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದ್ದರೂ ಅಸಲಿಗೆ ಬೆಂಗಳೂರು ಮಹಾನಗರ ಹೊಸ ಭರವಸೆಯನ್ನು ಈ ನಿಟ್ಟಿನಲ್ಲಿ ಇಟ್ಟುಕೊಂಡಿದೆ. ಬಿಬಿಎಂಪಿಯಲ್ಲಿ ಪ್ರಮೀಳಾ ಸಾಮ್ರಾಜ್ಯವೇ ಇರುವುದರಿಂದ ವಿವಿಧ ಸಮಸ್ಯೆಗಳ ಬಗ್ಗೆ ವಿಭಿನ್ನ ಚರ್ಚೆ, ಪರಿಹಾರದ ಹೊಸ ಹೆಜ್ಜೆಗಳು ಗೋಚರವಾಗುವ ಲಕ್ಷಣಗಳು ಕಾಣುತ್ತಿವೆ.
Advertisement