ಕೋರಂ ಇಲ್ಲದೆ ಕಲಾಪ

ವಿಧಾನಸಭೆಯಲ್ಲಿ ಬುಧವಾರ ಕೋರಂ ಇಲ್ಲದಿದ್ದರೂ ಕಲಾಪ ನಡೆಸಿ ಪ್ರತಿಪಕ್ಷದ ಟೀಕೆಗೆ ಒಳಗಾಯಿತು ಸರ್ಕಾರ. ಪ್ರತಿಪಕ್ಷಗಳು...
ವಿಧಾನಸಭೆ
ವಿಧಾನಸಭೆ

ವಿಧಾನಸಭೆ: ವಿಧಾನಸಭೆಯಲ್ಲಿ ಬುಧವಾರ ಕೋರಂ ಇಲ್ಲದಿದ್ದರೂ ಕಲಾಪ ನಡೆಸಿ ಪ್ರತಿಪಕ್ಷದ ಟೀಕೆಗೆ ಒಳಗಾಯಿತು ಸರ್ಕಾರ. ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದಾಗ ಆಡಳಿತ ಪಕ್ಷ ಮೂವರು ಸಚಿವರು ಸೇರಿ ಉಳಿದದ್ದು 11 ಮಂದಿ ಮಾತ್ರ. ಆದರೂ ಕಲಾಪ ಮುಂದುವರಿದಾಗ ಆಕ್ಷೇಪ ವ್ಯಕ್ತವಾಯಿತು. ಬುಧವಾರ ಬೆಳಗ್ಗೆ 11.05ಕ್ಕೆ ಸದನ ಆರಂಭವಾದಾಗ ಆಡಳಿತ ಪಕ್ಷದಲ್ಲಿ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇರಲ್ಲಿಲ್ಲ. ಎರಡು ಮತ್ತು ಮೂರನೇ ಸಾಲು ಸೇರಿ ಮೂವರು ಸಚಿವರಿದ್ದರು. ಏಳುಜನ ಶಾಸಕರಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಡಳಿತ ಪಕ್ಷದ ವೈಖರಿಯನ್ನು ಖಂಡಿಸಿದರು. ಸರ್ಕಾರಕ್ಕೆ ಕಲಾಪ ನಡೆಸುವ ಆಸಕ್ತಿಯೇ  ಇಲ್ಲ ಎಂದು ಹೇಳಿ ತಮ್ಮ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರೂ ಕೂಡ ಸಭಾತ್ಯಾಗ ಮಾಡಿದರು. ಅವರೆಲ್ಲ ಹೋದ ಮೇಲೆ ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಅವರು ರಾಜೀವ ಅವರಿಗೆ ಮಾತನಾಡಲು ಸೂಚಿಸಿದರು. ಆದರೆ, ಸಚಿವರೇ ಇಲ್ಲ ಎಂದು ಹೇಳಿ ಅವರೂ ಸಭಾತ್ಯಾಗ ಮಾಡಿದರು.
ಇಷ್ಟಾದರೂ, ಕಾಂಗ್ರೆಸ್ನ ಪ್ರಸನ್ನಕುಮಾರ್ ಅವರಿಗೆ ಮಾತನಾಡಲು ಉಪಸಭಾಧ್ಯಕ್ಷರು ಹೇಳಿದರು. ಅವರು ಮಾತನಾಡಲು ಪ್ರಾರಂಭಿಸಿದರು. ಐದು ನಿಮಿಷ ಮಾತನಾಡಿದರು.
ಅಷ್ಟರಲ್ಲೇ ಸದನ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ `ಕ್ರಿಯಾ ಲೋಪ' ಎತ್ತಿದರು. ಐವರು ಸಚಿವರು ಸೇರಿದಂತೆ 19 ಸದಸ್ಯರು ಮಾತ್ರ ಸದನದಲ್ಲಿದ್ದಾಗ ಹೇಗೆ ಕಲಾಪ ನಡೆಸುತ್ತೀರಿ ಎಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಮೂರ್ನಾಲ್ಕು ಸದಸ್ಯರು ಬಂದರು. ಕಾರ್ಯದರ್ಶಿಯವರು ಸಭಾಧ್ಯಕ್ಷ ಪೀಠಕ್ಕೆ ಅಲ್ಲಿಂದೇ ಗಣನೆ ಮಾಡಿ ಈಗ ಕೋರಂ ಇದೆ ಎಂದು ಸಭಾಧ್ಯಕ್ಷರಿಗೆ ತಿಳಿಸಿದರು. ಅದನ್ನೇ ಸಭಾಧ್ಯಕ್ಷರು ಹೇಳಿದಾಗ, ಈಗ ಕೋರಂ ಆಯಿತು. ಆಗ ಇರಲಿಲ್ಲ. ನಡೆಸಿದ್ದು ಸರಿಯಲ್ಲ ಎಂದು ಶೆಟ್ಟರ್ ದೂರಿದರು. ಈಗ ನೀವೆಲ್ಲ ಬಂದೀರಲ್ಲಾ ನಡೆಸೋಣ ಬಿಡಿ ಎಂದು ಸಭಾಧ್ಯಕ್ಷರು ಹೇಳಿ ಕಲಾಪ ಮುಂದುವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com