ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ (ಸಂಗ್ರಹ ಚಿತ್ರ)
ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ (ಸಂಗ್ರಹ ಚಿತ್ರ)

ಮತ್ತೆ ಬಲಗೊಂಡ ದಲಿತ ಸಿಎಂ ಧ್ವನಿ

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಸಿಎಂ ಪಟ್ಟ ನೀಡಬೇಕೆಂಬ ಗಟ್ಟಿ ಧ್ವನಿಯನ್ನು ರಾಜ್ಯದ ಪ್ರಮುಖ ದಲಿತ ಸಂಘಟನೆಗಳು ಮತ್ತೆ ಮೊಳಗಿಸಿವೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಸಿಎಂ ಪಟ್ಟ ನೀಡಬೇಕೆಂಬ ಗಟ್ಟಿ ಧ್ವನಿಯನ್ನು ರಾಜ್ಯದ ಪ್ರಮುಖ ದಲಿತ ಸಂಘಟನೆಗಳು ಮತ್ತೆ ಮೊಳಗಿಸಿವೆ.

ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ 20ಕ್ಕೂ ಹೆಚ್ಚು ಪ್ರಮುಖ ದಲಿತ ಸಂಘಟನೆಯ ಅಧ್ಯಕ್ಷರು ಹಾಗೂ ಮುಖಂಡರು ಈ ವಾದ ಮುಂದಿಟ್ಟಿದ್ದಾರೆ. ದಲಿತರಿಗೆ ಈ ಬಾರಿಯೂ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರೆ ರಾಜ್ಯಾದ್ಯಂತ ಪ್ರಬಲ ಹೋರಾಟ ನಡೆಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ ಎಂದು ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದ ಬೆನ್ನಲ್ಲೇ ಈ ಸಭೆ ನಡೆದಿರುವುದು ತೀವ್ರಕುತೂಹಲಕ್ಕೆ ಕಾರಣವಾಗಿದೆ.

ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಂ, ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ, ಆದಿ ಜಾಂಬವ ಸಂಘದ ಸಿದ್ದರಾಜು, ಬಿ.ಜಿ.ಸಾಗರ್, ಎಂ.ಶಂಕರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದಲಿತರಿಗೆ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಲಾಗುತ್ತಿದೆ. 2006ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ತಪ್ಪಿಸಿದರು. ಈ ಕಾರಣಕ್ಕಾಗಿ ಅವರು ಹಾಕಿದ ಕಣ್ಣೀರು, ಅದರ ಹಿಂದಿನ ನೋವು ನಮ್ಮ ಮುಂದೆ ಇದ್ದರೂ ಈ ಬಾರಿ ಮತ್ತೆ ದಲಿತರು ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿಸಿದರು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಆಶಾಭಾವ ನಮ್ಮಲ್ಲಿ ಇತ್ತು. ಆದರೆ ಹಿಂದಿನ ನೋವು ಮಾತ್ರ ಮರುಕಳಿಸಿದೆ ಎಂದು ಸಭೆಯಲ್ಲಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಖಂಡರಾದ ಪಾವಗಡ ಶ್ರೀರಾಂ, ಎಂ.ವೆಂಕಟಸ್ವಾಮಿ, ಸಿದ್ದರಾಜು, ಬಿ.ಜಿ.ಸಾಗರ್, `ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಕೇಳಿದ ಮಾತ್ರಕ್ಕೆ ನಾವು ಸಿದ್ದರಾಮಯ್ಯ ವಿರೋಧಿಯಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಅಹಿಂದ ಹೋರಾಟದಲ್ಲಿ ಬೆಳೆದು ಬಂದವರು. ಹೀಗಾಗಿ ದಲಿತರು ಮುಖ್ಯಮಂತ್ರಿ ಆಗುವುದಕ್ಕೆ ಅವರೇ ಸಹಕರಿಸಲಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತಿದ್ದಾರೆ. ಎರಡೂವರೆ ವರ್ಷ ಅ„ಕಾರ ನಡೆಸಿದ ನಂತರ ಅವರಾಗಿಯೇ ಅಧಿಕಾರ ತ್ಯಜಿಸಲಿ. ಪರಮೇಶ್ವರ ಅವರನ್ನು ಮುಖ್ಯಮಂತ್ರಿಯಾಗುವುದಕ್ಕೆ ಸಹಕರಿಸಿ ತಾವು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಾರಥ್ಯವಹಿಸಲಿ ಎಂದು ಆಗ್ರಹಿಸಿದರು. `ಪರಮೇಶ್ವರ ಮುಖ್ಯಮಂತ್ರಿಯಾಗುವುದಕ್ಕಾಗಿ ಮಾತ್ರ ಹೋರಾಟವೇ ಅಥವಾ ದಲಿತ ಮುಖಂಡರಲ್ಲಿ ಯಾರಾದರೊಬ್ಬರು ಆ ಹುದ್ದೆ ಏರಿದರೆ ಸಾಕೆ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪರಮೇಶ್ವರ್ ಶ್ರಮಿಸಿದ್ದಾರೆ.

ಖರ್ಗೆ ಅವರಿಗೆ ರಾಷ್ಟ್ರ ರಾಜಕಾರಣದ ಜವಾಬ್ದಾರಿ ನೀಡಲಾಗಿದೆ. ಆದರೆ ದಲಿತ ಮುಖಂಡರಲ್ಲಿ ಯಾರೇ ಮುಖ್ಯಮಂತ್ರಿಯಾದರೂ ನಾವು ಸ್ವಾಗತಿಸುತ್ತೇವೆ' ಎಂದು ಹೇಳಿದರು. ಪರಮೇಶ್ವರ ಅವರು ಸಂಘರ್ಷ ಬೇಡ ಎಂಬ ಭಾವನೆಯಲ್ಲಿ ಇರಬಹುದು. ಆದರೆ ದಲಿತಪರ ಸಂಘಟನೆಗಳು ಇದನ್ನು ಒಪ್ಪುವುದಕ್ಕೆ ಸಿದ್ದವಿಲ್ಲ. ಅವರನ್ನು ಭೇಟಿ ಮಾಡಿ ನಾಯಕತ್ವ ವಹಿಸಿಕೊಳ್ಳುವಂತೆ ಆಗ್ರಹಿಸುತ್ತೇವೆ. ಅಷ್ಟು ಮಾತ್ರವಲ್ಲ ಸಿದ್ದರಾಮಯ್ಯ ಅವರಲ್ಲೂ ಮನವಿ ಮಾಡುತ್ತೇವೆ. ನಾವು ನಿಮ್ಮ ವಿರೋಧಿಗಳಲ್ಲ. ಹಿಂದುಳಿದ ವರ್ಗದವರ ರೀತಿ ದಲಿತರೂ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡದಿದ್ದರೆ ನಾವೆಲ್ಲರೂ ಮತ್ತೆ ಹೋರಾಟ ನಡೆಸಬೇಕಾಗುತ್ತದೆ. ಉಳಿದ ಸಮುದಾಯದವರ ರೀತಿ ದಲಿತರೂ ರಾಜಕೀಯ ಹೋರಾಟಕ್ಕೆ ತೊಡಗಬೇಕಾಗುತ್ತದೆ. ಕಾಂಗ್ರೆಸ್‍ನಿಂದ ನಮಗೆ ಅನ್ಯಾಯವಾಗಿದೆ ಎಂದು ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಟ್ವೀಟ್
ದಲಿತರಿಗೆ ಸಿಎಂ ಪಟ್ಟಕ್ಕೆ ಆಗ್ರಹಿಸಿ ದಲಿತ ಮುಖಂಡರು ಮಾಡಿರುವ ಆಗ್ರಹ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಪತ್ರಿಕೆಯ ವರದಿಗಾರರೊಬ್ಬರು ಟ್ವಿಟರ್‍ನಲ್ಲಿ ಪ್ರಶ್ನಿಸಿದಾಗ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, `ಸಭೆ ಆಯೋಜಿಸಿರುವ ಸಂಘಟನೆಗಳು ಯಾವುವು ಎಂದು ಗೊತ್ತಿಲ್ಲ. ರಾಜ್ಯದಲ್ಲಿ ಆಯಕಟ್ಟಿನ ಹುದ್ದೆ ಬದಲಾವಣೆ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಸರ್ಕಾರ ಜನೋಪಯೋಗಿ ಬಜೆಟ್ ತಯಾರಿಯಲ್ಲಿ ಮಗ್ನವಾಗಿದ್ದು, ಕೈ ಖಾಲಿ ಇಲ್ಲ' ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com