ಕಾಂಗ್ರೆಸ್ ತನ ಕಾಣದ ಸರ್ಕಾರ

ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಮಹತ್ವದ ಚರ್ಚೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ (ಸಂಗ್ರಹ ಚಿತ್ರ)
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ (ಸಂಗ್ರಹ ಚಿತ್ರ)
Updated on

ಪರಮ ಆಪ್ತರ ಸಮಾಲೋಚನೆ, ಕೃಷ್ಣ-ಖರ್ಗೆಗೆ ಪಕ್ಷದ ವಸ್ತು ಸ್ಥಿತಿ
ಕೆಪಿಸಿಸಿ ಅಧ್ಯಕ್ಷರ ನಡೆ: ರಾಜ್ಯ ರಾಜಕಾರಣದಲ್ಲಿ ಹೊಸ ಹುರುಪು
ಬೆಂಗಳೂರು:
ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕಾರಣದಲ್ಲಿ ಹೊಸ ಹುರುಪು ಕಾಣಿಸಿಕೊಂಡಿದ್ದು, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಮಹತ್ವದ ಚರ್ಚೆ ನಡೆಸಿದ್ದಾರೆ.

ನೂತನ ವರ್ಷಕ್ಕೆ ಶುಭಾಶಯ ಹೇಳುವ ನೆಪದಲ್ಲಿ ಖರ್ಗೆ ಮತ್ತು ಕೃಷ್ಣ ನಿವಾಸಕ್ಕೆ ದಂಪತಿ ಸಹಿತ ತೆರಳಿದ ಪರಮೇಶ್ವರ, ಮುಖಂಡರ ಜತೆ ತಲಾ ಒಂದು ಗಂಟೆ ಚರ್ಚೆ ನಡೆಸಿದರು. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗಿನ ಎಲ್ಲ ವಿದ್ಯಮಾನಗಳನ್ನು ಇವರಿಬ್ಬರ ಎದುರು ತೆರೆದಿಟ್ಟ ಅವರು, ಸರ್ಕಾರಕ್ಕೆ ಕಾಂಗ್ರೆಸ್ ತನವಿಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಪರಮೇಶ್ವರ ಅವರ ಎಲ್ಲ ಕನಸು ಈ ವರ್ಷ ಈಡೇರಲಿ ಎಂದು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹರಸಿರುವುದು ಎನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಭೇಟಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಎಡೆ ಮಾಡಿಕೊಡುತ್ತಿದ್ದಂತೆ ಜಾಗರೂಕರಾದ ಪರಮೇಶ್ವರ, ಗುರುವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೂ ತೆರಳಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

ಮೊದಲ ಭೇಟಿ: ಬಜೆಟ್ ಅಧಿವೇಶನದ ಬಳಿಕ ಸರ್ಕಾರದಲ್ಲಿ ಸ್ಥಿತ್ಯಂತರವಾಗುತ್ತದೆ ಎಂಬ ಗುಸುಗುಸು ವರ್ಷಾಂತ್ಯದ ವೇಳೆ ಗಾಢವಾಗಿತ್ತು. ಇದರ ಕೇಂದ್ರ ಸ್ಥಾನದಲ್ಲಿದ್ದ ಪರಮೇಶ್ವರ, ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಪತ್ನಿ ಕನ್ನಿಕಾ ಪರಮೇಶ್ವರಿ ಜತೆ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜನ ಖರ್ಗೆ ಅವರ ಜತೆ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಶುಭಕೋರಿದರು. ಆ ಬಳಿಕ ಖರ್ಗೆ ಅವರ ಜತೆ ರಹಸ್ಯವಾಗಿ ಒಂದು ಗಂಟೆ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ, ಸರ್ಕಾರದ ಕಾರ್ಯವೈಖರಿ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ. ಬೆಳಗಾವಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಸಮಾಧಾನ, ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಸೇರಿ ಹಲವು ಬೆಳವಣಿಗೆ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ರಾಜಕಾರಣದಲ್ಲಿ ಬದಲಾವಣೆ ಸಹಜ ರಾಜಕಾರಣ ನಿಂತ ನೀರಲ್ಲ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಯಾವಾಗಬೇಕಾದರೂ ಆಗಬಹುದು. ರಾಜಕೀಯದಲ್ಲಿ ನಿವೃತ್ತಿ ಎಂಬುದಿಲ್ಲ. ರಾಜಕಾರಣಿ ಸೈನಿಕನಿದ್ದಂತೆ. ನಾನು ಸಕ್ರಿಯ ರಾಜಕಾರಣದಿಂದ ದೂರ ಸರಿದಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಸಕ್ರಿಯನಾಗುತ್ತೇನೆ. ಪರಮೇಶ್ವರ ನನಗೆ ಆತ್ಮೀಯರು. ನನ್ನ ಸರ್ಕಾರದಲ್ಲಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದರು. ನನ್ನ ಸರ್ಕಾರದ ಇಮೇಜ್ ಹೆಚ್ಚುವುದಕ್ಕೆ ಅವರ ಕೊಡುಗೆಯೂ ಇತ್ತು. ನಮ್ಮಿಬ್ಬರ ಸಂಬಂಧ ಹಳೆಯದು. ಪರಮೇಶ್ವರ ಮನಸಿನಲ್ಲಿ ಅಂದುಕೊಂಡಿದ್ದೆಲ್ಲ 2015ರಲ್ಲಿ ಈಡೇರಲಿ.
-ಎಸ್‌ಎಂ ಕೃಷ್ಣಾ, ಮಾಜಿ ಮುಖ್ಯಮಂತ್ರಿ

ಹಿರಿಯಣ್ಣನಿದ್ದಂತೆ

ಖರ್ಗೆ ನನಗೆ ಹಿರಿಯಣ್ಣನಿದ್ದಂತೆ. ಹೊಸ ವರ್ಷದ ಶುಭಕೋರಲು ಆಗಮಿಸಿದ್ದೆ. 2015ರಲ್ಲಿ ನಿಮಗೆ ಎಲ್ಲ ಆಶಯವೂ ಈಡೇರಲಿ ಎಂದು ಮನಃಪೂರ್ವಕವಾಗಿ ಅವರು ಹಾರೈಸಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನಿಮಗೆ ಲಭಿಸಲಿ ಎಂದು ನಾನು ಅವರಿಗೆ ಹಾರೈಸಿದ್ದೇನೆ.
-ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com