
ಬೆಂಗಳೂರು: ಅರ್ಕಾವತಿ ಹಗರಣ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟ `ತೋಳ ಬಂತು ತೋಳ' ಹೋರಾಟ ಅಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಅರ್ಕಾವತಿ ಡಿನೋಟಿಫಿಕೇಷನ್ ಅಕ್ರಮ ನಡೆದಿರುವುದು ನೂರಕ್ಕೆ ನೂರು ಸತ್ಯ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಮುಖ್ಯಮಂತ್ರಿ ವಿರುದ್ಧ ವಿಚಾರಣೆ ನಡೆಸುವಂತೆ ರಾಜ್ಯಪಾಲರನ್ನು ಕೋರುತ್ತೇವೆ. ಆದರೆ, ರಾಜ್ಯಪಾಲರು ನಮ್ಮ ಭೇಟಿಗೆ ಇನ್ನೂ ದಿನ ನಿಗದಿ ಮಾಡಿಲ್ಲ.
ಹೀಗಾಗಿ ಕೊಂಚ ವಿಳಂಬವಾಗಿದೆ ಎಂದು ಅವರು ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೃತಜ್ಞತಾ ಅರ್ಪಣಾ ಕಾರ್ಯ ಕ್ರಮ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಈ ಹಗರಣ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಎಂದಿಗೂ ಹಿಂದೆ ಸರಿಯು ವುದಿಲ್ಲ. ಏಕೆಂದರೆ, ಇದು ವ್ಯಕ್ತಿಯ ಹೋರಾಟವಲ್ಲ. ಪಕ್ಷದ ಹೋರಾಟ. ಅಷ್ಟಕ್ಕೂ ಈ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಕೇಸು ದಾಖಲಿಸುವುದಿಲ್ಲ. ಕೇಸು ದಾಖಲಿಸುವವರಿಗೆ ಬಿಜೆಪಿ ದಾಖಲೆ ನೀಡುತ್ತದೆ.
ಈಗ ಆ ಎಲ್ಲ ದಾಖಲೆಗಳನ್ನೂ ಸಂಗ್ರಹಿಸಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು. ಈ ಹಿಂದೆ ಡಿನೋಟಿಫಿಕೇಷನ್ ವಿರುದ್ಧ ಇದೇ ಸಿದ್ದರಾಮಯ್ಯ ಹೋರಾಟ ನಡೆಸಿದ್ದರು.ಈಗ ಅದೇ ಸುಳಿಯಲ್ಲಿ ಅವರೇ ಸಿಲುಕಿದ್ದಾರೆ. ಈ ಹಗರಣದಲ್ಲಿ ಕಾಂಗ್ರೆಸ್ ಅನುಕೂಲ ಪಡೆದಿರುವುದು ಸ್ಪಷ್ಟವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯೇ ನಡೆಯಬೇಕು. ಆದ್ದರಿಂದ ಈ ವಿಚಾರವನ್ನೇ ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯಲು ಬಿಜೆಪಿ ಹೋರಾಟ ನಡೆಸಲಿದೆ.
ಇದು ವಿರೋಧ ಪಕ್ಷವಾಗಿರುವ ನಮ್ಮ ಕರ್ತವ್ಯ ಕೂಡ. ಈ ಬಗ್ಗೆ ಇತ್ತೀಚಿಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿಯಲ್ಲೂ ಚರ್ಚೆಯಾಗಿದೆ. ಸಭೆಯಲ್ಲಿ ನಾನೇ ಭಾಗವಹಿಸಿದ್ದೆ. ರಾಜ್ಯದಲ್ಲಿ ಇದರ ವಿರುದ್ಧ ಹೋರಾಟ ನಡೆಸುವುದಕ್ಕೆ ಕೋರ್ ಕಮಿಟಿ ಕೂಡ ಹಸಿರು ನಿಶಾನೆ ತೋರಿಸಿದೆ ಎಂದು ಅವರು ವಿವರಿಸಿದರು.
Advertisement