ಬಿಜೆಪಿಯದು ಖಾಲಿ ಡಬ್ಬ: ಸಿದ್ದರಾಮಯ್ಯ

ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಬಿಜೆಪಿಯವರು ಖಾಲಿ ಡಬ್ಬ ಬಡಿದು ಶಬ್ದ ಮಾಡುತ್ತಿದ್ದಾರೆ..
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಬಿಜೆಪಿಯವರು ಖಾಲಿ ಡಬ್ಬ ಬಡಿದು ಶಬ್ದ ಮಾಡುತ್ತಿದ್ದಾರೆ. ಯಾವುದೇ ಅಕ್ರಮ ನಡೆಯದಿದ್ದರೂ ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಪ್ರಯತ್ನದೊಂದಿಗೆ ನನ್ನ ವ್ಯಕ್ತಿತ್ವಕ್ಕೆ ಕುಂದು ತರಲು ಹೊರಟಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ತಮ್ಮ ಸರ್ಕಾರ ಯಾವುದೇ ಅಕ್ರಮವೆಸಗಿಲ್ಲ. ಕೋರ್ಟ್ ಆದೇಶದ ಅನುಸಾರ ರೀ-ಮಾಡಿಫಿಕೇಷನ್ ಸ್ಕೀಮ್ ನಡಿ ಕ್ರಮ ಕೈಗೊಂಡಿದ್ದೇವೆ. ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ನಡೆದಂತೆ ಡಿನೋಟಿಫಿಕೇಷನ್ ತಂಟೆಗೆ ನಾವು ಹೋಗಿಲ್ಲ.

ಎಲ್ಲಾ ಅಕ್ರಮ ನಡೆದಿರುವುದು ಬಿಜೆಪಿಯವರ ಆಡಳಿತದ ಅವಧಿಯಲ್ಲಿ ಎಂದು ಹೇಳಿದರು. ಸುಳ್ಳು ಹೇಳಿ ನಂಬಿಸುವುದನ್ನು ಬಿಜೆಪಿಯ ವರು ಅಜೆಂಡಾ ಮಾಡಿಕೊಂಡಿದ್ದಾರೆ. ವ್ಯಕ್ತಿತ್ವ ಹರಣ ಹಾಗೂ ಸುಳ್ಳು ಸತ್ಯ ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು  ಕಿಡಿಕಾರಿದರು.

ನ್ಯಾಯಾಲಯ ಕಾಮಗಾರಿಗಳಿಗೆ ಮುಕ್ತಿ
ಅಪೂರ್ಣಗೊಂಡಿರುವ ನ್ಯಾಯಾಲಯ ಕಟ್ಟಡಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಆದ್ಯತೆ ಅನುಸಾರ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಹೆಚ್ಚಿಸಲಾಗುವುದು ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮಾತನಾಡಿ, ಕೆಪಿಸಿಸಿ ಕಾನೂನು ಘಟಕದ ಸದಸ್ಯರಿಗೆ ನಾಮ ನಿರ್ದೇಶನದಲ್ಲಿ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಸೂಚಿಸಿದರು.

ಹಳೆ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ನೇಮಿಸಿದ್ದ ನಾಮ ನಿರ್ದೇಶಿತ ಸದಸ್ಯರನ್ನು ಕಿತ್ತುಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ನೇುಸುವಂತೆ ಇದೇ ವೇಳೆ ಅವರು ತಾಕೀತು ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಕಳೆದ ಐದು ವರ್ಷಗಳ ಅವ„ಯಲ್ಲಿ ಕೆಪಿಸಿಸಿ ಕಾನೂನು ಘಟಕ ಹೊಸ ರೂಪ ಪಡೆದುಕೊಂಡು ಪ್ರಬಲವಾಗಿದೆ. ಪ್ರತಿ ಜಿಲ್ಲೆಯಲ್ಲೂ ಕಾನೂನು ಘಟಕ ಸ್ಥಾಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಕ್ಷದ ಸದಸ್ಯತ್ವ ನೋಂದಣಿ ನಡೆಯುತ್ತಿದ್ದು, ಕಾನೂನು ಘಟಕದ ಪ್ರತಿ ವಕೀಲರು ತಲಾ 50 ಮಂದಿಯನ್ನು ಸದಸ್ಯರನ್ನಾಗಿ ಮಾಡುವಂತೆ ಕರೆ ನೀಡಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ ಮಾತನಾಡಿ, ಅರ್ಕಾವತಿ ವಿಚಾರದಲ್ಲಿ ಬಿಜೆಪಿ ವಿನಾಕಾರಣ ಸುಳ್ಳು ಆರೋಪ ಮಾಡುತ್ತಾ, ಗೊಂದಲ ಮೂಡಿಸಲು ಹೊರಟಿದೆ. ಈ ಬಗ್ಗೆ ವಸ್ತುಸ್ಥಿತಿಯನ್ನು ಜನರ ಮುಂದಿಡಲು ಪ್ರತಿ ಜಿಲ್ಲೆಯಲ್ಲೂ ಕಾನೂನು ಘಟಕ ಸಭೆಗಳನ್ನು ನಡೆಸಲಿದೆ ಎಂದರು.


ಬೆಳಗಾವಿಯಲ್ಲಿ ವಕೀಲರ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು. ಇಂಧನ ಸಚಿವ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಶಾಂತಕುಮಾರ್, ಕರ್ನಾಟಕ ವಕೀಲರ ಪರಿಷತ್‍ನ ಅಧ್ಯಕ್ಷ ಮುನಿಯಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com