ಅರ್ಕಾವತಿ: ಮುಖ್ಯಮಂತ್ರಿ ಮೇಲಿನ ಆರೋಪ ವಿರೋಧಿಸಿ

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಆರೋಪಗಳನ್ನು ವಿರೋಧಿಸಬೇಕು...
ಅರ್ಕಾವತಿ ಬಡಾವಣೆಯ ಸತ್ಯ, ಮಿಥ್ಯೆ ವಿಚಾರಸಂಕಿರಣ (ಸಂಗ್ರಹ ಚಿತ್ರ)
ಅರ್ಕಾವತಿ ಬಡಾವಣೆಯ ಸತ್ಯ, ಮಿಥ್ಯೆ ವಿಚಾರಸಂಕಿರಣ (ಸಂಗ್ರಹ ಚಿತ್ರ)
Updated on

ಬೆಂಗಳೂರು: `ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಆರೋಪಗಳನ್ನು ವಿರೋಧಿಸಬೇಕು. ಕಾನೂನು ಹೋರಾಟ ಹಾಗೂ ಜನಾಭಿಪ್ರಾಯದ ಮೂಲಕ ವಿರೋಧ ಪಕ್ಷಗಳ ಹುನ್ನಾರವನ್ನು ಬಯಲಿಗೆಳೆಯಬೇಕು.

' ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಅರ್ಕಾವತಿ ಬಡಾವಣೆಯ ಸತ್ಯ ಮತ್ತು ಮಿಥ್ಯೆ' ವಿಚಾರ ಸಂಕಿರಣದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಶಾಸಕ ಕೆ.ಆರ್.ರಮೇಶ್‍ಕುಮಾರ್ ಮಾತನಾಡಿ, ಅರ್ಕಾವತಿ ಬಡಾವಣೆ ಭೂ ಸ್ವಾಧೀನ ಪ್ರಕ್ರಿಯೆಗೆ 11 ವರ್ಷಗಳಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷಗಳಾಗಿವೆ. 11 ವರ್ಷದ ಕೂಸಿನ ಮೇಲೆ ಮುಖ್ಯಮಂತ್ರಿ ಅತ್ಯಾಚಾರ ನಡೆಸುತ್ತಿದ್ದಾರೆಂದೇ ವಿರೋಧ ಪಕ್ಷಗಳು ಬಿಂಬಿಸುತ್ತಿವೆ.

ಲೋಕಸಭಾ ಚುನಾವಣೆಗೆ ಮುಖ್ಯಮಂತ್ರಿ ಹಣ ಸಂಗ್ರಹಿಸಲು ಡಿನೋಟಿಫಿಕೇಷನ್ ಮಾಡಿದ್ದಾರೆಂದು ವಿರೋಧಿಗಳು ಆರೋಪಿಸುತ್ತಾರೆ. ಪೊಲೀಸ್ ಇಲಾಖೆಗೆ ಅಪರಾಧಿಗಳನ್ನು ಹಿಡಿದು ಕೊಡುವಲ್ಲಿ ಕೆಲವು ವೇಳೆ ಹಳೆಯ ಅಪರಾಧಿಗಳೇ ನೆರವಾಗುತ್ತಾರೆ. ಹೀಗೆಯೇ ಅರ್ಕಾವತಿ ಪ್ರಕರಣದಲ್ಲಿ ಹಳೆಯ ಅಪರಾಧಿಗಳೇ ಹೊಸದಾದ ಆಲೋಚನೆಗಳನ್ನು ಹುಟ್ಟುಹಾಕಿ ಭ್ರಷ್ಟರನ್ನು ಕಂಡು ಹಿಡಿಯಲು ನೆರವಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿಂದೆ ದೇವರಾಜು ಅರಸು ಅಧಿಕಾರದಲ್ಲಿದ್ದಾಗ ಇಂಥದ್ದೇ ಆರೋಪಗಳು ಕೇಳಿ ಬಂದಿದ್ದವು. ಪೂರ್ವಗ್ರಹ ಪೀಡಿತ ಮನಸ್ಸುಗಳು ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಒಂದು ಬಾರಿ ಹೇಳಿದ್ದನ್ನು 100 ಬಾರಿ ಹೇಳಿ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸುತ್ತಿದ್ದಾರೆ.

ಸಿಬ್ಬಂದಿ ಅಲ್ಲದವರು ಸಿದ್ದರಾಮಯ್ಯ ಅವರ ಬಳಿ ಸದಾ ಇರುತ್ತಾರೆ. ಈ ವಲಯವನ್ನು ಆದಷ್ಟು ದೂರ ಇಡಬೇಕು. ಸಿದ್ದರಾಮಯ್ಯ ಅವರಿಗೆ ತೊಂದರೆಯಾದರೆ ಜನರು ಕಣ್ಣೀರು ಹಾಕುತ್ತಾರೆ. ಅಪವಾದಗಳನ್ನು ಹೊರಿಸಿ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಸಹಿ ಏಕೆ ಹಾಕಲಿಲ್ಲ?
ಮಾಜಿ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್ ಮಾತನಾಡಿ, ಅರ್ಕಾವತಿ ಭೂಸ್ವಾಧೀನ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ 6 ಮಾರ್ಗ ಸೂಚಿಗಳ ಅನ್ವಯ ಬಿಡಿಎ ಸರ್ಕಾರಕ್ಕೆ ಮರುಪರಿಶೀಲನಾ ವರದಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಜಗದೀಶ್ ಶೆಟ್ಟರ್, ಚುನಾವಣಾ ನೀತಿ ಸಂಹಿತೆ ಕಾರಣದಿಂದ ಭೂಸ್ವಾಧೀನ ಕೈ ಬಿಡುವ
ಪ್ರಸ್ತಾವನೆಗೆ ಸಹಿ ಹಾಕಲಿಲ್ಲ.

ನಂತರ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಭೂ ಮಾಲೀಕರಿಂದ ನಿರಂತರವಾಗಿ ನ್ಯಾಯಾಂಗ ನಿಂದನೆ ದೂರು ದಾಖಲಾಯಿತು. ಅನಿವಾರ್ಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಹಿ ಹಾಕದೇ ಹೋಗಿದ್ದರೆ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗಿತ್ತು. ಆದರೆ ಈ ಸತ್ಯವನ್ನು ಪ್ರತಿಪಕ್ಷಗಳು ಜನರಿಗೆ ತಿಳಿಸುತ್ತಿಲ್ಲ
ಎಂದರು.

ಸಾಹಿತಿ ಕೋ.ಚನ್ನಬಸಪ್ಪ ಮಾತನಾಡಿ 10 ವರ್ಷಗಳ ಹಿಂದೆ ನಡೆದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕ್ರಮೇಣವಾಗಿ ಅಕ್ರಮಗಳು ನಡೆದಿವೆ ಇತ್ತೀಚೆಗೆ ಯಾವುದೇ ಅಕ್ರಮ ನಡೆಯದಿದ್ದರೂ ಪ್ರತಿಪಕ್ಷಗಳು ವಿನಾಕಾರಣ ವಿವಾದ ಸೃಷ್ಟಿಮಾಡುತ್ತಿವೆ. ರಾಜ್ಯಪಾಲರ ಬಳಿ ವಿಚಾರಣೆಗೆ ಅನುಮತಿ ನೀಡುವಂತೆ ಕೋರಲು ಹೋದವರು ಮೌನವಾಗಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದರು.

ಹಿರಿಯ ವಕೀಲ ಎಂ.ಟಿ.ನಾಣಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್,  ಎಂಎಲ್ಸಿ ವಿ.ಎಸ್.ಉಗ್ರಪ್ಪ, ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com