ಸದನದಲ್ಲಿ ಸಚಿವರ ಗೈರು: ಸ್ಪೀಕರ್ ಕಾಗೋಡು ತರಾಟೆ

ಅಧಿವೇಶನದ ಸಮಯದಲ್ಲಿ ಸಚಿವರು ಗೈರುಹಾಜರಾಗುವ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಗುರುವಾರ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ...
ಸಚಿವ ಕಾಗೋಡು ತಿಮ್ಮಪ್ಪ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ
ಸಚಿವ ಕಾಗೋಡು ತಿಮ್ಮಪ್ಪ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ

ಬೆಳಗಾವಿ: ಅಧಿವೇಶನದ ಸಮಯದಲ್ಲಿ ಸಚಿವರು ಗೈರುಹಾಜರಾಗುವ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಗುರುವಾರ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ಸದನ ಕಲಾಪ ಆರಂಭವಾಗುವ ಹೊತ್ತಿಗೆ ವಿರೋಧಪಕ್ಷಗಳ ಶಾಸಕರು, ಅನೇಕ ಸಚಿವರು ಬಾರದಿರುವ ಕುರಿತು ಸಭಾಧ್ಯಕ್ಷರ ಗಮನಕ್ಕೆ ತಂದರು. ಸಚಿವರುಗಳಾದ ಎಸ್.ಆರ್.ಪಾಟೀಲ್, ಉಮಾಶ್ರೀ, ಬಾಬುರಾವ್ ಚಿಂಚನಸೂರ, ಹೆಚ್.ಸಿ.ಮಹದೇವಪ್ಪ ಅವರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ಸಚಿವರು ಬಂದಿರಲಿಲ್ಲ.

ಈ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರದಲ್ಲಿ ಒಬ್ಬೊಬ್ಬ ಸಚಿವರು ಒಂದೊಂದು ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಏನು ನಡೆಯುತ್ತಿದೆ ಸರ್ಕಾರದಲ್ಲಿ, ಹೆಚ್ಚಿನ ಶಾಸಕರು ಗೈರುಹಾಜರಾಗಿರುವಾಗ ಕಲಾಪ ನಡೆಸುವುದರಿಂದ ಪ್ರಯೋಜನವಾದರೂ ಏನು, ಖಾಲಿಯಿರುವ ಕುರ್ಚಿಗಳ ಜೊತೆ ನಾವು ಮಾತನಾಡಬೇಕೆ ಎಂದು  ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಹದೇವಪ್ಪ, ಸರ್ಕಾರದ ಒಳಗೆ ಯಾವುದೇ ತೊಂದರೆಯಿಲ್ಲ, ಎಲ್ಲಾ ಸಚಿವರು ದಕ್ಷತೆಯಿಂದಲೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರ ಗೈರಿನ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು.ಕಲಾಪದ ಸಂದರ್ಭದಲ್ಲಿ ಸದನಕ್ಕೆ ಬಾರದೆ ಅವರು ಮತ್ತೇನು ಕೆಲಸ ಮಾಡುತ್ತಾರೆ? ಅವರು ಈ ಸದನದ ಬಗ್ಗೆ ಏನೆಂದು ತಿಳಿದುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತ, ಉತ್ತರ ಕರ್ನಾಟಕದ ಅಭಿವೃದ್ಧಿಯಂತಹ ಪ್ರಮುಖ ವಿಷಯದ ಕುರಿತು ಮಾತನಾಡುವಾಗ ಸಚಿವರುಗಳೇ ಇಲ್ಲದಿದ್ದರೆ ಏನು ಪ್ರಯೋಜನ. ಅವರಿಗೆ ಈ ವಿಷಯಗಳಲ್ಲಿ ಆಸಕ್ತಿಯಿಲ್ಲ ಎಂದು ಕಾಣುತ್ತದೆ ಎಂದರು.

ಆಗ ಕಾಂಗ್ರೆಸ್ ನ ಶಾಸಕ ರಮೇಶ್ ಕುಮಾರ್ ಮಾತನಾಡಿ, ಸಚಿವರು ಮತ್ತು ಶಾಸಕರು ಸದನದ ಬಗ್ಗೆ ಗೌರವ ತೋರಿಸದಿದ್ದರೆ ನಮ್ಮನ್ನು ಆರಿಸಿ ಕಳುಹಿಸಿದ ಜನರು ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದರು.

ನಂತರ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಸಚಿವ ಚಿಂಚನಸೂರ ಅವರ ವಿರುದ್ಧ ಕೇಳಿಬರುತ್ತಿರುವ ಚೆಕ್ ಬೌನ್ಸ್ ಪ್ರಕರಣದ ವಿಷಯವನ್ನು ಪ್ರಸ್ತಾಪಿಸಿದಾಗ,ಅದು ಅವರ ಖಾಸಗಿ ವಿಷಯ, ಅದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಆಗ ವಿಧಾನಸಭಾಧ್ಯಕ್ಷರು, ನಿನ್ನೆ ಸಂಜೆ ನಿಲ್ಲಿಸಿದ್ದ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯದ ಕುರಿತು ಚರ್ಚೆ ಮುಂದುವರಿಸುವಂತೆ ಶೆಟ್ಟರ್ ಅವರಿಗೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com