ರೈತರ ಕಡೆಗಣಿಸಿದರೆ ಸಾವಿನ ಭಾಗ್ಯ

ರೈತರ ಸರಣಿ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಝಾಡಿಸಿದ ಪ್ರತಿಪಕ್ಷಗಳು, ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತವಾಗಿ ಸಲಹೆ ನೀಡಿದ ಪ್ರಸಂಗ ವಿಧಾನಪರಿಷತ್ತಿನ ಎರಡನೇ ಅವಧಿಯಲ್ಲಿ ನಡೆಯಿತು...
ವಿಧಾನಮಂಡಲ ಅಧಿವೇಶನ
ವಿಧಾನಮಂಡಲ ಅಧಿವೇಶನ
Updated on

ವಿಧಾನಪರಿಷತ್ತು: ರೈತರ ಸರಣಿ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಝಾಡಿಸಿದ ಪ್ರತಿಪಕ್ಷಗಳು, ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತವಾಗಿ ಸಲಹೆ ನೀಡಿದ ಪ್ರಸಂಗ ವಿಧಾನಪರಿಷತ್ತಿನ ಎರಡನೇ ಅವಧಿಯಲ್ಲಿ ನಡೆಯಿತು.

ಕೃಷಿ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿಲ್ಲ, ಸಹಕಾರ ಸಚಿವರು ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಮುಖ್ಯಮಂತ್ರಿಗಳು ಹೋದಲ್ಲೆಲ್ಲಾ ಸೆಕ್ಯುರಿಟಿ ಗಾರ್ಡ್ ರೀತಿ ಪಕ್ಕ ನಿಂತಿರುತ್ತಾರೆ, ತೋಟಗಾರಿಕೆ ಸಚಿವರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಲಾಯರ್ ಗಿರಿ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳಂತೂ ತಮ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿಲ್ಲ ಎಂದು ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿರುವಾಗ ಕೃಷಿ, ತೋಟಗಾರಿಕೆ, ಸಕ್ಕರೆ, ಸಹಕಾರ ಸಚಿವರು ಒಂದು ಕಡೆ ಕುಳಿತು ಸಭೆ ನಡೆಸಿಲ್ಲ. ಇನ್ನು ಕೃಷಿ, ತೋಟಗಾರಿಕೆ, ಪಶು ಹೀಗೆ ಅನೇಕ ವಿಶ್ವವಿದ್ಯಾಲಯಗಳಿವೆ. ಇಲ್ಲಿರುವ ಕುಲಪತಿಗಳು, ಸಂಶೋಧಕರು ಸರ್ಕಾರದ ಸಂಬಳ, ಭತ್ಯೆ ಪಡೆಯುತ್ತಾರೆ ವಿನಃ ರೈತನ ಸಾವಿನ ಬಗ್ಗೆ ಕೊಂಚವಾದರೂ ಚಿಂತಿಸುತ್ತಿಲ್ಲ. ನಾವೇನಾದರೂ ಮಾತನಾಡಿದರೆ, ಕಂಪ್ಯೂಟರ್ ನಲ್ಲಿ ಬತ್ತ ಬೆಳೆಯಲಾಗುವುದಿಲ್ಲ ಎಂದು ಟೀಕಿಸುತ್ತಾರೆ ಎಂದು ಹೇಳಿದರು.

ಸರ್ಕಾರ ಏನಾದರೂ ಭಾಗ್ಯ ಯೋಜನೆ ತರಲಿ ರೈತನನ್ನು ಕಡೆಗಣಿಸಿದರೆ ಸಾವಿನ ಭಾಗ್ಯ ನೀಡಿದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ನೀಡಬೇಕಾದ ಪ್ರೋತ್ಸಾಹಧನ ಕಳೆದ ಆರು ತಿಂಗಳಿಂದ ಬಿಡುಗಡೆಯಾಗಿಲ್ಲ. ಇನ್ನೊಂದೆಡೆ ಹಾಲಿನ ಉತ್ಪಾದನೆ ಹೆಚ್ಚುತ್ತಿದ್ದಂತೆ ಹಾಲಿನ ದರ ಕೂಡ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೃಷಿ ಸಚಿವರಿಗೆ ಸ್ಟೇಟ್ ದರ್ಜೆ ಸ್ಥಾನಮಾನವಿದೆ, ಅವರಿಗೆ ಕ್ಯಾಬಿನೆಟ್ ಸ್ಥಾನಕೊಟ್ಟಿಲ್ಲ. ಈ ನೋವಿನಲ್ಲೇ ಅವರಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಕಿಚಾಯಿಸಿದರು. ಹಿರಿಯ ಸದಸ್ಯ ಕೆ.ಬಿ. ಶಾಣಪ್ಪ ಮಾತನಾಡಿ, ರೈತನ ಸಾವು ಒಂದು ಪಿಡುಗಾಗಿದೆ. ಇಂತಹ ಸಂದರ್ಭದಲ್ಲಿ ಸ್ಪಂದಿಸದ ರಾಜ ರಾಜನೇ ಅಲ್ಲ ಎಂದು ಮುಖ್ಯಮಂತ್ರಿಯವರನ್ನು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com