

ಬೆಂಗಳೂರು: ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರನ್ನು ರಕ್ಷಿಸಲು ಸರ್ಕಾರ ಮೃದುಧೋರಣೆ ತಳೆದಿದೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಆಂಗ್ಲಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತರು ಕ್ಲೀನ್ ಚಿಟ್ ನೀಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.
ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಹಾಗು ಅವರ ಪುತ್ರ ಅಶ್ವಿನ್ ರಾವ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ದಿಕ್ಕು ತಪ್ಪಿಸಲೆಂದೇ ಸರ್ಕಾರ ವ್ಯವಸ್ಥಿತವಾಗಿ ಉಪಲೋಕಾಯುಕ್ತರಿಬ್ಬರ ನಡುವಿನ ಸಂಘರ್ಷವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಜುಗಲ್ ಬಂದಿ ಆಟ ಆಡಲು ಹೊರಟಂತೆ ಕಾಣುತ್ತಿದೆ.
ಇಡೀ ಲೋಕಾಯುಕ್ತ ಪ್ರಕರಣದಲ್ಲಿ ವಿವಾದದ ಕೇಂದ್ರ ಬಿಂಗು ನ್ಯಾ.ಭಾಸ್ಕರ್ ರಾವ್.
ಆದರೆ ಅವರ ಬಗ್ಗೆ ಕೇಳಿಬಂದಿರುವ ಆರೋಪಗಳ ಬಗ್ಗೆ ಸೊಲ್ಲೆತ್ತದ ಕಾಂಗ್ರೆಸ್ ಮುಖಂಡರು ದಿಢೀರನೆ ಉಪಲೋಕಾಯುಕ್ತ ನ್ಯಾ.ಸುಭಾಷ್ ಅಡಿ ವಿರುದ್ಧ ತಿರುಗಿ ಬೀಳಲು ಕಾರಣಗಳೇನು ಎಂಬ ಚರ್ಚೆಗಳು ಆರಂಭವಾಗಿದೆ.
ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಈ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಿ.ಎಸ್ ಉಗ್ರಪ್ಪ, ಹೆಚ್.ಎಂ ರೇವಣ್ಣ, ಪಿ.ಎಂ ನರೇಂದ್ರ ಸ್ವಾಮೀ ಅವರು ಮತ್ತೆ ಪತ್ರಿಕಾಗೋಷ್ಠಿ ನಡೆಸಿ ನ್ಯಾ.ಸುಭಾಷ್ ಅಡಿ ವಿರುದ್ಧ ವಾಗ್ದಾಳಿ ನಡೆಸಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಲೋಕಾಯುಕ್ತ ಕ್ಲೀನ್ ಚಿಟ್: ಲಾಲ್ ಬಾಗ್ ಬಳಿ ಸೈಟೊಂದರ ಭೂ ಪರಿವರ್ತನೆ ಹಾಗೂ ಅಕ್ರಮ ಡಿನೋಟಿಫಿಕೇಶನ್ ಬಗ್ಗೆ ಸಿ.ಎಂ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ 2 ಪ್ರಕರಣಗಳಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ನ್ಯಾ.ಭಾಸ್ಕರ್ ರಾವ್ ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.