ಕಾಗೋಡು ವಿರುದ್ಧ ಕೆ.ಎಸ್.ಈಶ್ವರಪ್ಪ ಕಿಡಿ
ವಿಧಾನ ಪರಿಷತ್: ಕಾಗೋಡು ತಿಮ್ಮಪ್ಪ ಸ್ವೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡು ವಿಧಾನ ಪರಿಷತ್ತಿಗೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಆಪಾದಿಸಿದರು.
ಕಾಗೋಡು ತಿಮ್ಮಪ್ಪ ಬೇಕಿದ್ದರೆ ಅವರ ಸದನದಲ್ಲಿ ಪ್ರತಿಪಕ್ಷದವರಂತೆ ಮಾತನಾಡಲಿ. ಪರಿಷತ್‍ಗೆ ಕೈ ಹಾಕುವುದು ಸರಿಯಲ್ಲ. ಸ್ವೀಕರ್ ತಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಅವರೇನೂ ಸರ್ವಾಧಿಕಾರಿಯಲ್ಲ. ಅವರು ಹೇಳಿದಂತೆ ಕೇಳುವುದಕ್ಕೆ ಪರಿಷತ್ ಸದಸ್ಯರೇನೂ ಕುರಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ವಿಭಜನೆ ಕುರಿತ ಮಹಾನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ತಿರಸ್ಕರಿಸಿದ ಪರಿಷತ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ವೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈಶ್ವರಪ್ಪ ಗುರುವಾರ ಸದನದಲ್ಲಿ ಈ ರೀತಿ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿಧೇಯಕವನ್ನು ಮತ್ತೆ ಪರಿಷತ್ತಿನಲ್ಲಿ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಪರಿಷತ್ತಿನ ಪರಂಪರೆ, ಹಿರಿಮೆ ವಿಚಾರ ಪ್ರಸ್ತಾಪಿಸಿದರು. ಆಗ ಸಿಟ್ಟಿಗೆದ್ದ ಈಶ್ವರಪ್ಪ, ವಿಧಾನಪರಿಷತ್ ಸದಸ್ಯರು ಪಾಲಿಕೆಗಳ ತಿದ್ದುಪಡಿ ವಿಧೇಯಕ ವನ್ನು ವಾಪಸ್ ಕಳುಹಿಸಿವುದಕ್ಕೆ ಸ್ವೀಕರ್ ಕಾಗೋಡು ತಿಮ್ಮಪ್ಪ, ಪರಿಷತ್ತಿನ ಬಗ್ಗೆ ಬಹಳ ಹಗುರವಾಗಿ ಮಾತನಾಡಿ ಅಪಮಾನ ಮಾಡಿದ್ದಾರೆ. ವಿಧೇಯಕ ವಾಪಸ್ ಬಂದಿರುವುದು ವಿಧಾನಸಭೆಗೆ ಅಗೌರವ ಎಂದಿದ್ದಾರೆ. ಅಷ್ಟೇ ಅಲ್ಲ. ವಿಧಾನಸಭೆಯಿಂದ ಪರಿಷತ್ ರಚನೆಯಾಗಿರುವುದರಿಂದ ವಾಪಸ್ ಕಳುಹಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಸದನದ ಬಗ್ಗೆ ಲಘುವಾಗಿ ಮಾತನಾಡಿ, ಅಪಮಾನಿಸಿದಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ಪರಿಷತ್ ಎಂದರೆ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮಲೆಕ್ಕಗರಿದ್ದಂತೆ ಅಲ್ಲ. ಇದು ಪರಂಪರೆ ಇರುವ ಹೆಮ್ಮೆಯ ಸದನ. ಅಷ್ಟಕ್ಕೂ ಇದು ಸಂವಿಧಾನ ಬದ್ಧವಾಗಿ ರಚನೆಯಾಗಿರುವುದು. ಆದ್ದರಿಂದ ಸದಸ್ಯರಿಗೆ ಸಿಕ್ಕಿರುವ ಹಕ್ಕು ಸಂವಿಧಾನ ಬದ್ಧವಾಗಿದೆ. ಇದೇನೂ ನಮಗೆ ಸಿಕ್ಕಿರುವ ಬಿಕ್ಷೆಯಲ್ಲ. ಇದನ್ನು ಸ್ಪೀಕರ್ ಅರ್ಥ ಮಾಡಿಕೊಳ್ಳಬೇಕು. ಏನೇ ಆಗಲಿ. ಸ್ವೀಕರ್ ಪರಿಷತ್‍ಗೆ ಅಪಮಾನ ಮಾಡಿದ್ದಾರೆ. ಹಾಗೆಂದು ಅವರ ಕ್ಷಮೆಯಾಚಿಸಬೇಕೆಂದು ಕೇಳುವುದಿಲ್ಲ. ಆದರೆ ಇನ್ನುಮುಂದೆ ಇದು ಮರುಕಳಿಸಬಾರದು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು. ಮಹತ್ವ ಅರಿತು ಮಾತನಾಡಲಿ: ಇದಕ್ಕೆ ದನಿಗೂಡಿಸಿದ ಜೆಡಿಎಸ್‍ನ ಬಸವರಾಜ ಹೊರಟ್ಟಿ, ಕಾಗೋಡು ತಿಮ್ಮಪ್ಪ ಅವರು 1979ರಲ್ಲಿ ಪರಿಷತ್ ರದ್ದುಗೊಳಿಸಬೇಕೆಂದು ವಿಧಾನಸಭೆಯಲ್ಲಿ ದನಿ ಎತ್ತಿದ್ದರು. ಆದರೆ 1981ರಲ್ಲಿ ಅವರೇ ಪರಿಷತ್ ಸದಸ್ಯರಾದರು. ಆದ್ದರಿಂದ ಸ್ವೀಕರ್ ಅವರು ಪರಿಷತ್ ಮಹತ್ವ ಅರಿತು ಮÁತನಾಡಬೇಕು ಎಂದು ಚುಚ್ಚಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ