ಅನುದಾನಿತ ಸಂಸ್ಥೆ ಸಿಬ್ಬಂದಿಗೆ ಪಿಂಚಣಿ ಇಲ್ಲ: ಸಿದ್ದರಾಮಯ್ಯ

ಸರ್ಕಾರಿ ಇಲಾಖೆಗಳಡಿ ಬರುವ ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ಸೊಸೈಟಿ, ಅನುದಾನಿತ ಸಂಸ್ಥೆಗಳ ಸಿಬ್ಬಂದಿಗೆ ಸರ್ಕಾರವೇ ಪಿಂಚಣಿ ನೀಡಲು ಸಾಧ್ಯವೇ ಇಲ್ಲ. ಸರ್ಕಾರಕ್ಕೆ ಭಾರ ಹೊರಲಾಗಲ್ಲ. ಕಷ್ಟ ಆಗುತ್ತದೆ ಎಂಬ ಮುಖ್ಯಮಂತ್ರಿಯ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on: 

ವಿಧಾನ ಪರಿಷತ್: ಸರ್ಕಾರಿ ಇಲಾಖೆಗಳಡಿ ಬರುವ ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ಸೊಸೈಟಿ, ಅನುದಾನಿತ ಸಂಸ್ಥೆಗಳ ಸಿಬ್ಬಂದಿಗೆ ಸರ್ಕಾರವೇ ಪಿಂಚಣಿ ನೀಡಲು ಸಾಧ್ಯವೇ ಇಲ್ಲ. ಸರ್ಕಾರಕ್ಕೆ ಭಾರ ಹೊರಲಾಗಲ್ಲ. ಕಷ್ಟ ಆಗುತ್ತದೆ ಎಂಬ ಮುಖ್ಯಮಂತ್ರಿಯ ನೇರ ನುಡಿಗೆ ಅಸಮಾಧಾನ ವ್ಯಕ್ತಪಡಿಸಿದ ಪದವೀಧರ ಮತ್ತು ಶಿಕ್ಷಣ ಕ್ಷೇತ್ರದ ಸದಸ್ಯರು ಸಭಾತ್ಯಾಗ ಮಾಡಿದರು.

ಬಿಜೆಪಿಯ ಅರುಣ ಶಹಾಪುರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರದ ವಿವಿಧ ಇಲಾಖೆಗೆ ಒಳಪಡುವ ಸ್ವಾಯತ್ತ ಸಂಸ್ಥೆ, ಮಂಡಳಿ, ಕಾರ್ಪೊರೇಷನ್, ಸೊಸೈಟಿ, ಅನುದಾನಿತ ಸಂಸ್ಥೆಗಳಿಗೆ 2006ರ ಬಳಿಕ ನೇಮಕಗೊಂಡ ನೌಕರರಿಗೆ ಪಿಂಚಣಿಯನ್ನು ಆಯಾ ಸಂಸ್ಥೆಗಳೇ ಭರಿಸಬೇಕು. ಇದಕ್ಕೆ ಸರ್ಕಾರ ಜವಾಬ್ದಾರಿ ಅಲ್ಲ. ರಾಜ್ಯದ ಬೊಕ್ಕಸಕ್ಕೆ ಇದು ಹೊರೆಯಾಗುತ್ತದೆ. ಹೀಗಾಗಿ ಸರ್ಕರ ಇಂತಹ ಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಹಾಗೂ ಜೆಡಿಎಸ್ ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಸದಸ್ಯರು, 2006ರ ನಂತರ ನೇಮಕಾತಿಯಾದವರಿಗೆ ಮಾತ್ರ ಈ ಕಾನೂನು ಅನ್ವಯಿಸುತ್ತದೆ, ಇದು ಸರಿಯಲ್ಲ ಎಂದರು. ನೆರೆಯ ರಾಜ್ಯಗಳಲ್ಲಿ ಇಂತಹ ಸಂಸ್ಥೆಗಳ ಸಿಬ್ಬಂದಿಗೆ ಸರ್ಕಾರವೇ ಪಿಂಚಣಿ ನೀಡುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಪರಿಶೀಲಿಸುವಂತೆ ಅರುಣ ಶಹಾಪೂರ ಆಗ್ರಹಿಸಿದರು. ಇದಕ್ಕೆ ಜೆಡಿಎಸ್ ನಾಯಕ ಬಸವರಾಜಹೊರಡಟ್ಟಿ, ಬಿಜೆಪಿಯ ಗಣೇಶ್ ಕಾರ್ಣಿಕ್, ಗೋ.ಮಧುಸೂಧನ್, ಜೆಡಿಎಸ್ ನ ನಾರಾಯಣಸ್ವಾಮಿ, ಮರಿತಿದ್ದೇಗೌಡ ಸೇರಿದಂತೆ ಇನ್ನಿತರರರು ಬೆಂಬಲ ವ್ಯಕ್ತಪಡಿಸಿದರು.

ಮತ್ತೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ 2006 ಬಳಿಕ ನೇಮಕಾತಿ ಹೊಂದಿದವರಿಗೆ ಆಯಾ ಸಂಸ್ಥೆಗಳೇ ಪಿಂಚಣಿ ನೀಡುವಂತೆ ಸೂಚಿಸಲಾಗಿದೆ. ಇತರೆ ರಾಜ್ಯದಲ್ಲಿ ಈ ಸೌಲಭ್ಯ  ನೀಡುತ್ತಿದ್ದರೆ, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಆದರೆ, ಸರ್ಕಾರ ಪಿಂಚಣಿ ನೀಡುವುದಿಲ್ಲ ಇದು ಗಂಭೀರವಾದ ಹಣಕಾಸಿನ ವಿಚಾರ ಹೀಗಾಗಿ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ನಿಮ್ಮ ಸರ್ಕಾರ ಇದ್ದಾಗ ಏಕೆ ಕೊಡಲಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com