
ವಿಧಾನಸಭೆ: ಹತ್ತು ಬಾರಿ ಬಜೆಟ್ ಮಂಡಿಸಿ `ಬಜೆಟ್ ಭಾಗ್ಯ' ಸಿದ್ದರಾಮಯ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಮಾತ್ರ 'ಸಾಲಭಾಗ್ಯ'ವನ್ನು ಯಾವುದೇ ಹಿಂಜರಿಕೆ ಇಲ್ಲದಂತೆ ಕರುಣಿಸಿದ್ದಾರೆ. ಕೇವಲ ಎರಡೇ ವರ್ಷದಲ್ಲಿ ರಾಜ್ಯದ ಮೇಲಿನ ಸಾಲದ ಹೊರೆಯನ್ನು ರು. 42 ಸಾವಿರ ಕೋಟಿ ಹೆಚ್ಚಿಸಿದ್ದಾರೆ.
ಸಾಲ ಮಾಡಬೇಡಿ ಎಂದು ಬೋಧಿಸುತ್ತಿದ್ದ, ಮತ್ತೊಬ್ಬರಿಗೆ ಬುದ್ಧಿಮಾತು ಹೇಳಿದ್ದ, ಅತ್ಯಂತ ಅನುಭವಿ `ಬಜೆಟ್ ತಜ್ಞ' ಎನಿಸಿಕೊಂಡ ಸಿದ್ದರಾಮಯ್ಯ ಅವರಿಂದ ಇಂಥ ಬಜೆಟ್‍ಅನ್ನು ರಾಜ್ಯ ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‍ಗೆ ಪ್ರತಿಕ್ರಿಯಿಸಿದ ರೀತಿ ಇದು.
ವಿತ್ತೀಯ ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ಆರಂಭಿಸಿದ ಶೆಟ್ಟರ್, `ಸಾಲಭಾಗ್ಯ'ದ ಬಗ್ಗೆ ತರಾಟೆ ತೆಗೆದು ಕೊಂಡರು. ಬಿಜೆಪಿ ಸರ್ಕಾರ ಇದ್ದ ಐದು ವರ್ಷದ ಅವಧಿಯಲ್ಲಿ ರು. 45,120 ಕೋಟಿ ಸಾಲ ಮಾಡಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಎರಡೇ ವರ್ಷದಲ್ಲಿ ರು.42,329 ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಮೇಲೆ ಒಟ್ಟಾರೆ ರು. 1,80,815 ಕೋಟಿ ಸಾಲ ಇದೆ. ಸಾಲ ಮಾಡಬೇಡಿ ಎಂದು ಪ್ರತಿಪಕ್ಷ ನಾಯಕರಾಗಿದ್ದಾಗ ಬುದ್ಧಿ ಹೇಳುತ್ತಿದ್ದ ಅತ್ಯಂತ ಅನುಭವಿ ಸಿದ್ದರಾಮಯ್ಯ, ಎರಡೇ ವರ್ಷದಲ್ಲಿ ಜನತೆಯ ಮೇಲೆ `ಸಾಲಭಾಗ್ಯ' ಹೇರಿದ್ದಾರೆ.
ಆರ್ಥಿಕ ಜವಾಬ್ದಾರಿ ಕಾಯಿದೆಯ ನಿಗದಿಯಲ್ಲೇ ಸಾಲ ಪಡೆಯಲಾಗಿದೆ ಎಂದು ಮುಂದೆ ಸಮಜಾಯಿಷಿಯನ್ನೂ ನೀಡುವ ಸಿದ್ದರಾಮಯ್ಯ ಅವರು, ಈ ನಿಗದಿ ಶೇ.25ರಷ್ಟಿದ್ದು ಇದನ್ನು ಶೇ.24.56ರಷ್ಟು ಪಡೆದುಕೊಂಡಿದ್ದಾರೆ ಎಂದರು. ಅಭಿವೃದ್ಧಿಯೂ ಇಲ್ಲ: ಹೋಗಲಿ ಸಾಲಕ್ಕೆ ತಕ್ಕಂತೆ ರಾಜ್ಯದಲ್ಲಿ ಅಭಿವೃದ್ಧಿಯಾದರೂ ಕಾಣಬೇಕಿತ್ತಲ್ಲವೇ? ಅದೂ ಇಲ್ಲ. ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿಯ ಚಿಹ್ನೆಯೇ ಇಲ್ಲ. ಅಭಿವೃದ್ಧಿ ಎಂಬುದು ಪ್ರಶ್ನಾರ್ಥಕವಾಗಿದೆ. ಎಲ್ಲ ಇಲಾಖೆಗಳ ಅಭಿವೃದ್ಧಿಯಲ್ಲೂ ಹಿನ್ನಡೆಯಾಗಿದೆ. ಶೇ.64ರಷ್ಟು ಮಾತ್ರ ಸರಾಸರಿ ಪ್ರಗತಿ ಕಾಣಲಾಗಿದೆ.
ಕೃಷಿ ಬೆಳವಣಿಗೆ 9.5ರಿಂದ 4.5ಕ್ಕೆ ಕುಸಿದಿದೆ. ಕೃಷಿ-ರೈತರ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ರೀತಿಯಲ್ಲಿ ಮಾತನಾಡುವ ಸಿದ್ದರಾಮಯ್ಯ ಅವರ ಜೀವನಮಟ್ಟವನ್ನು ಹೆಚ್ಚಿಸುವ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಳೆದ ಬಜೆಟ್‍ನಲ್ಲಿ ಯೋಜನಾ ಗಾತ್ರದ ಶೇ.28ರಷ್ಟಿದ್ದ ಕೃಷಿ-ತೋಟಗಾರಿಕೆ ಕ್ಷೇತ್ರದ ಅನುದಾನ ಈ ಬಾರಿ ಶೇ.10.06ಕ್ಕೆ ಇಳಿದಿದೆ. ರೈತರಿಗೆ ಉತ್ತೇಜನ ನೀಡಿದ ಈ ಇವರು ಹಿಂದೆ, ನಮ್ಮ ಪ್ರತ್ಯೇಕ ಕೃಷಿ ಬಜೆಟ್ ಅನ್ನು ಪ್ರಶ್ನಿಸಿದ್ದರು. ಅದರ ಅಗತ್ಯ ಈಗ ಅರ್ಥ ಆಗುತ್ತಿದೆ ಅಲ್ಲವೇ ಎಂದು ಪ್ರಶ್ನಿಸಿದರು. ಬಜೆಟ್ ಭಾಷಣದಲ್ಲಿ ಎಲ್ಲರ ಸಮಗ್ರ ಅಭಿವೃದ್ಧಿ `ಇನ್ ಕ್ಯೂಸಿವ್ ಗ್ರೋಥ್' ಎಂದೆಲ್ಲ ಹೇಳಿಕೊಂಡಿದ್ದಾರೆ. ಆದರೆ, ಅವರ ಭಾಷಣದ ಆಶಯಕ್ಕೆ ಪೂರಕವಾಗಿ ಬಜೆಟ್‍ನಲ್ಲಿ ಏನೂ ಇಲ್ಲ. ಭಾಷಣದ ಸಾಲು ಹಾಗೂ ಬಜೆಟ್‍ಗೆ ಅಜಗಜಾಂತರ.
'ಅಹಿಂದ ಬಜೆಟ್' ಎಂದು ಮಾಧ್ಯಮಗಳಿಂದ ಬಣ್ಣಿಸಿಕೊಂಡಿದ್ದರೂ, ಈಗಲೂ ಆ ವರ್ಗಗಳು ಪ್ರಗತಿ ಕಾಣದ್ದಕ್ಕೆ ಇದೇ ಕಾಂಗ್ರೆಸ್ ಸರ್ಕಾರವೇ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಾರಣ. ಅವರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಮಾಡಿದರೇ ಹೊರತು, ಅವರ ಕಲ್ಯಾಣಕ್ಕಾಗಿ ಕೆಲಸವನ್ನೇ ಮಾಡಲಿಲ್ಲ ಎಂದು ದೂರಿದರು.
ಪ್ರಾದೇಶಿಕ ಅಸಮತೋಲನ ತೊಡೆದುಹಾಕುವ ನಿಟ್ಟಿನಲ್ಲಿ ಡಾ. ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ಧಾರವಾಡದ ಜಿಎಂಡಿಆರ್ ಸಂಸ್ಥೆಗೆ ಸಮೀಕ್ಷೆ ಒದಗಿಸುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಹೇಳಿದ್ದರು. ಅವರಿಗೆ ಅವರಿಗೆ ಒಂದು ಸೂಚನೆಯನ್ನೂ ಸರ್ಕಾರ ಇನ್ನೂ ಕೊಟ್ಟಿಲ್ಲ ಎಂದರೆ ಆ ಭಾಗದ ಜನರ ಬಗ್ಗೆ ಎಂತಹ ಕಾಳಜಿ ಇದೆ ಎಂಬುದು ಅರ್ಥವಾಗುತ್ತದೆ. ಅಬಕಾರಿ ಇಲಾಖೆಗೆ ಗುರಿ ಕೊಟ್ಟಿದ್ದೀರಿ. ಸಾಧಿಸಲಿಲ್ಲ ಎಂದರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದೀರಿ. ಅಧಿಕಾರಿಗಳು ವೈನ್ ಶಾಪ್, ಬಾರ್ ಗಳ ಮಾಲೀಕರಿಗೆ ಹೆಚ್ಚಿನ ಮಾರಾಟ ಮಾಡಲು ತಾಕೀತು ಮಾಡುತ್ತಿದ್ದಾರೆ. ಇದೆಂತಹ ಬೆಳವಣಿಗೆ ಸ್ವಾಮಿ? ಇದರ ಬದಲು ಮದ್ಯ ಮಾರಾಟಗಾರರ ಬೇಡಿಕೆಯಂತೆ ವ್ಯಾಟ್ ತೆಗೆಯುವ ಅಥವಾ ಎಲ್ಲರಿಗೂ ವಿಧಿಸುವ ಕಾರ್ಯ ಮಾಡಿದರೆ ಹೆಚ್ಚಿನ ಆದಾಯ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.
Advertisement