ಮೇಕೆ'ದಾಟು'ಲು ಬಿಡಲ್ಲ: ಎಂ.ಬಿ ಪಾಟೀಲ್

ಮೇಕೆದಾಟು ಯೋಜನೆಗೆ ತಮಿಳುನಾಡು ಒಡ್ಡುವ ಎಲ್ಲ ರೀತಿಯ ಅಡ್ಡಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ವಿಧಾನಪರಿಷತ್ತು: ಮೇಕೆದಾಟು ಯೋಜನೆಗೆ ತಮಿಳುನಾಡು ಒಡ್ಡುವ ಎಲ್ಲ ರೀತಿಯ ಅಡ್ಡಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನವಾಗದಂತೆ ಕ್ರಮಕೈಗೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಜೆಟ್ ಭಾಷಣದಲ್ಲಿ ಹೇಳಿರುವುದನ್ನು ಬಿಜೆಪಿಯ ಗಣೇಶ್ ಕಾರ್ಣಿಕ್ ಶುಕ್ರವಾರ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಕುಡಿಯುವ ನೀರು ಪಡೆಯುವ ಈ ಯೋಜನೆಗೆ ತಮಿಳುನಾಡು ಆಕ್ಷೇಪಿಸುವುದಾದರೆ ಹೇಗೆ? ಇದನ್ನು ಸರಿಪಡಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, `ರಾಜ್ಯದ್ದೇ ಆಗಿರುವ ಕಾವೇರಿ ನದಿಯಿಂದ ಕುಡಿಯುವ ನೀರು ಸೌಲಭ್ಯ ಕಲ್ಪಿಸಿಕೊಳ್ಳಲು ಸರ್ಕಾರ ಈ ಯೋಜನೆ ಬಗ್ಗೆ ಚಿಂತಿಸಿದೆ. ಸದ್ಯಕ್ಕೆ ಯೋಜನೆಯ ಸಾಧ್ಯಾಸಾಧ್ಯತೆ ಬಗ್ಗೆ ವರದಿ ಪಡೆಯಲು ಮುಂದಾಗಿದೆ. ಆದರೆ, ತಮಿಳುನಾಡು ಯೋಜನೆ ಆರಂಭಿಸುವ ಮುನ್ನವೇ ಆಕ್ಷೇಪ ಎತ್ತಿದೆ. ಪ್ರಧಾನಿಗೂ ಆಕ್ಷೇಪದ ಪತ್ರ ಸಲ್ಲಿಸಿದೆ. ಆದರೆ ಇದಕ್ಕೆ ಅಗತ್ಯ ಉತ್ತರ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ' ಎಂದರು.

ದೊಣೆ ನಾಯಕನ ಅಪ್ಪಣೆಯೇ ?
ಕಾವೇರಿ ನಮ್ಮ ರಾಜ್ಯದಲ್ಲಿ ಹರಿಯುವ ನದಿ. ಅದರಿಂದ ನಾಡಿನ 3 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪಡೆಯಲು ಮೇಕೆದಾಟು ಯೋಜನೆ ಅನಿವಾರ್ಯವಾಗಿದೆ. ಆದರೆ ಇದಕ್ಕೆ ತಮಿಳುನಾಡು ಆಕ್ಷೇಪ ಸಲ್ಲಿಸುತ್ತದೆ ಎಂದರೆ, ಅದನ್ನು ಸಹಿಸಲಾಗದು ಎಂದು ಪ್ರತಿಪಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು. ಮೇಕೆದಾಟು ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಪ್ರತಿಪಕ್ಷದ ಬೆಂಬಲವಿದೆ. ಈ ವಿಚಾರದಲ್ಲಿ ನಾವು ಸದಾ ನಿಮ್ಮ ಜತೆ ಇರುತ್ತೇವೆ. ಯಾರಿಗೂ ಹೆದರದೇ ಸರ್ಕಾರ ಮುಂದೆ ಹೋಗಬೇಕು ಎಂದು ಅವರು ಬೆನ್ನುತಟ್ಟಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಎಲ್ಲವನ್ನೂ ಯೋಚಿಸಿಯೇ ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದರು.

ಯೋಜನೆ ಸ್ಥಗಿತಕ್ಕೆ ಕೇಂದ್ರ ಬರಬೇಕಂತೆ
ಚೆನ್ನೈ: ಮೇಕೆದಾಟು ಯೋಜನೆ ವಿರುದ್ಧ ಬಂದ್‍ಗೆ ಕರೆ ನೀಡಿರುವುದಷ್ಟೇ ಅಲ್ಲ, ತಮಿಳುನಾಡು ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಲ್ಲಿನ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧವೇ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೆ ಈ ಯೋಜನೆ ಸ್ಥಗಿತಕ್ಕಾಗಿ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲಾಗಿದೆ. ರಾಜ್ಯದ ಒಪ್ಪಿಗೆ ಇಲ್ಲದೇ ಮೇಕೆದಾಟುವಿನಲ್ಲಿ ಯಾವುದೇ ಯೋಜನೆ ಕೈಗೊಳ್ಳ ಬಾರದು ಎಂಬುದು ತಮಿಳುನಾಡ ಸರ್ಕಾರದ ವಾದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com