ಬಿಎಸ್ ವೈ ವಿರುದ್ಧ ಕ್ರಮ ಕೈಗೊಳ್ಳದಿರಲು ಹೇಳಿದ್ದ 'ಕೈ' ನಾಯಕರು..!: ಮಾಜಿ ರಾಜ್ಯಪಾಲರಿಂದ ಹೊಸ ಬಾಂಬ್

ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಜನಾರ್ಧನನ ರೆಡ್ಡಿ ಮತ್ತು ಅವರ ಸಹೋದರರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕರೇ ಆ ಸಂದರ್ಭದಲ್ಲಿ ಲಾಬಿ ನಡೆಸಿದ್ದರು...
ಹಂಸರಾಜ್ ಭಾರದ್ವಾಜ್-ಬಿಎಸ್ ವೈ(ಸಂಗ್ರಹ ಚಿತ್ರ)
ಹಂಸರಾಜ್ ಭಾರದ್ವಾಜ್-ಬಿಎಸ್ ವೈ(ಸಂಗ್ರಹ ಚಿತ್ರ)
Updated on

ನವದೆಹಲಿ: ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಜನಾರ್ಧನನ ರೆಡ್ಡಿ ಮತ್ತು ಅವರ ಸಹೋದರರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕರೇ ಆ ಸಂದರ್ಭದಲ್ಲಿ ಲಾಬಿ ನಡೆಸಿದ್ದರು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.

ಖಾಸಗಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾರದ್ವಾಜ್ ಅವರು, ಕರ್ನಾಟಕದಲ್ಲಿ ರಾಜ್ಯಪಾಲನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಹಾಗೂ ಸಹೋದರರ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ನಾಯಕರೇ ಅಡ್ಡಿಪಡಿಸಿದ್ದರೆಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರೇ ಬಿಜೆಪಿ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಹಾಗಾಗಿ ಕಳಂಕಿತ ಬಿಜೆಪಿ ನಾಯಕರ ಪರ ಕಾಂಗ್ರೆಸ್ ನಾಯಕರು ಲಾಬಿ ನಡೆಸಿದ್ದರು ಎಂದು ಭಾರದ್ವಾಜ್ ಹೇಳಿದ್ದಾರೆ.

ಆದರೆ ನಾನು ರಾಜ್ಯಪಾಲನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಭಾರದ್ವಾಜ್ ಅವರು, 2011ರಲ್ಲಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೆ. ರಾಜ್ಯದಲ್ಲಿ ಈಗ ಪ್ರಬಲ ಕಾಂಗ್ರೆಸ್ ಸರ್ಕಾರ ಇದೆ. ಅದಕ್ಕೆ ಪ್ರಬಲ ನಾಯಕತ್ವ ಕಾರಣವಲ್ಲ. ಅಂದು ನಾನು ಪ್ರಾಮಾಣಿಕವಾಗಿ ಕೈಗೊಂಡ ಕ್ರಮದಿಂದಾಗಿಯೇ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಏರಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಸ್ವಂತಬಲದ ಮೇಲೆ ಮೊದಲ ಬಾರಿಗೆ ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರ ಹಲವು ವಿವಾದಗಳಿಗೆ ತುತ್ತಾಗಿತ್ತು. ಅಕ್ರಮ ಡಿನೋಟಿಫಿಕೇಷನ್ ಮತ್ತು ಅಕ್ರಮ ಗಣಿಗಾರಿಕೆ ಆರೋಪಗಳು ಇಡೀ ಸರ್ಕಾರವನ್ನು ಅಲುಗಾಡಿಸಿದ್ದಷ್ಟೇ ಅಲ್ಲದೆ ಮೂರು ಬಾರಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ ಕುಖ್ಯಾತಿ ಕೂಡ ಗಳಿಸಿತ್ತು. ಪ್ರಮುಖವಾಗಿ ಹಲವಾರು ನಾಟಕೀಯ ಬೆಳವಣಿಗೆ ನಂತರ ಬಿಎಸ್ ವೈಯನ್ನು ಸಿಎಂ ಹುದ್ದೆಯಿಂದ ಬಲವಂತವಾಗಿ ಕೆಳಗಿಳಿಸಲಾಗಿತ್ತು. ನಂತರ 2013ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಏರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com