

ಬೆಂಗಳೂರು: ತಾಕತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಗುರುವಾರ ಸವಾಲು ಹಾಕಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ನಡೆಯುತ್ತಿರುವ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆಯನ್ನು ಸರ್ಕಾರ ಸಿಬಿಐಗೆ ವಹಿಸಿದರೆ ನಾನು ಎಲ್ಲಾ ದಾಖಲೆಗಳನ್ನು ಕೊಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಈ ದಂಧೆಯ ಹಿಂದೆ ರಾಜನ್ ಮತ್ತು ರೀತು ಎಂಬ ಹೆಸರು ಕೇಳಿ ಬಂದಿದೆ. ಅವ್ಯಾಹತವಾಗಿ ದಂಧೆ ನಡೆಯುತ್ತಿದೆ. ಈ ದಂಧೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ? ಎಂದ ಅವರು, ಈ ದಂಧೆಯನ್ನು ಕೋಟ್ಯಂತರ ರೂ. ಹಗರಣ ಮುಕ್ತ ಸರ್ಕಾರ ಎಂದು ಘೋಷಿಸಿಕೊಳ್ಳುವವರು ತಾಕತ್ತಿದ್ದರೆ, ಸಿಬಿಐಗೆ ವಹಿಸಲಿ ಎಂದು ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಏನು ಕ್ರಮಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಅವರು, ಚೆಕ್‌ಪೋಸ್ಟ್‌ಗಳಲ್ಲಿ ಲಾರಿಗಳನ್ನು ತಡೆಹಿಡಿದಾಗ ಅದನ್ನು ಬಿಟ್ಟುಕೊಡಲು ಶಾಸಕರಿಂದಲೇ ಸೂಚನೆ ರವಾನೆಯಾಗುತ್ತದೆ. ಇದು ಭ್ರಷ್ಟಾಚಾರ ಮುಕ್ತ ಹೇಗಾದೀತು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕಾಗಿಯೇ ಸಮಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಹಿಂದಾ ಪರವಾಗಿದ್ದೇನೆ. ಇದರಲ್ಲಿ ಯಾವುದೇ ಮುಜುಗರವಿಲ್ಲ ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿಗಳು ಅಹಿಂದಾ ವರ್ಗದ ಅಭಿವೃದ್ಧಿಗೆ ಎಷ್ಟು ಹಣ ನೀಡಿದ್ದೀರಿ. ಕೇವಲ ಪ್ರಚಾರಕ್ಕೆ ಹೇಳಿಕೊಳ್ಳುತ್ತಿದ್ದೀರಾ ಎಂದು ಅಪಹಾಸ್ಯ ಮಾಡಿದ್ದಾರೆ.
ಕಬ್ಬು ಬೆಳೆಗಾರರಿಗೆ 2,800 ಕೋಟಿ ರೂ. ಇನ್ನೂ ಬಾಕಿ ನೀಡಬೇಕಿದೆ. ಸರ್ಕಾರ ಒಂದು ಟನ್ ಕಬ್ಬಿಗೆ 2,500 ರೂ. ನಿಗದಿಪಡಿಸಿದ್ದರೂ, ಕಾರ್ಖಾನೆ ಮಾಲೀಕರು 1,500 ರೂ.ಗಿಂತ ಹೆಚ್ಚಿಗೆ ನಯಾ ಪೈಸೆ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರ ಏನು ಕ್ರಮಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಲ ಮನ್ನಾ ಮಾಡುವುದಾಗಿ ಹೇಳಿಕೊಳ್ಳಲಾಗುತ್ತಿದೆ. ಆದರೆ ಇದನ್ನು ಇವರ ಖಜಾನೆಯಿಂದ ಕೊಟ್ಟಿಲ್ಲ. ನಿಗಮ, ಮಂಡಳಿಗಳಿಂದ ಹೊಂದಾಣಿಕೆ ಮಾಡಿಕೊಂಡ ಹಣದಿಂದ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.