
ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೆವು. ಕಾಂಗ್ರೆಸ್ ಧಿಮಾಕ್ ಮಾಡಲಿ ಎಂದು ಬೆಂಬಲ ಕೊಟ್ಟಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಬೆಂಗಳೂರು ನಗರ ಅಭಿವೃದ್ಧಿಗಾಗಿ ಕಾಂಗ್ರೆಸ್ ಜತೆ ಕೈ ಜೋಡಿಸಿದೆವು. ಆದರೆ ಈಗ ನಮಗೆ ಪಶ್ಚಾತ್ತಾಪ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಕುಮಾರಸ್ವಾಮಿ, ರಸ್ತೆಯ ಗುಂಡಿ ಮುಚ್ಚಿಸಿಲ್ಲ, ಕಸ ತೆಗೆಯುತ್ತಿಲ್ಲ, ಜೆಡಿಎಸ್ ಕಾರ್ಪೋರೇಟರ್ ಗಳಿಗೆ ಕಸ ಎತ್ತಿಸಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಜೆಡಿಎಸ್ ಕಾರ್ಪೋರೇಟರ್ ವಾರ್ಡ್ ಗಳಿಗೆ ಅನುದಾನ ನೀಡಲು ಕಾಂಗ್ರೆಸ್ ಬಿಡುತ್ತಿಲ್ಲ ಎಂದು ಶಾಸಕ ಮುನಿರತ್ನ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಪೋರೇಟರ್ಸ್ ಗಳನ್ನು ಕೇರಳದ ರೆಸಾರ್ಟ್ ಗೆ ಕಳುಹಿಸಿ ಕಾಂಗ್ರೆಸ್ ಅಧಿಕಾರ ಹಿಡಿದದ್ದು ಯಾವ ಪುರುಷಾರ್ಥಕ್ಕೆ? ಇಂಥ ಆಡಳಿತವನ್ನು ನೋಡಿಯೂ ಸುಮ್ಮನಿರಲೂ ಸಾಧ್ಯವೇ ಪ್ರಶ್ನಿಸಿದರು. ಕಾಂಗ್ರೆಸ್ ಹೀಗೆಯೇ ತನ್ನ ಕೆಟ್ಟ ಅಡಳಿತ ಮುದುವರಿಸಿದರೇ ಮೈತ್ರಿ ಮುಂದುವರಿಸುವುದು ಅಸಾಧ್ಯ, ಕಾಂಗ್ರೆಸ್ ಗೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಟರಿಕೆ ನೀಡಿದ್ದಾರೆ.
Advertisement