ನಿರಾಣಿ ಬಳಿ ಕಾರು ಖರೀದಿಗೆ ಹಣವಿದೆ, ರೈತರಿಗೆ ಕೊಡಲು ಇಲ್ಲ: ವಿ.ಎಸ್ ಉಗ್ರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದದ ಬಳಿಕ ಇದೀಗ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾನಿ ಅವರು ನೀಡಿರುವ ದುಬಾರಿ ಕಾರು ಉಡುಗೊರೆ ವಿವಾದವೊಂದನ್ನು ಹುಟ್ಟುಹಾಕಿದೆ...
ಮಾಜಿ ಸಚಿವ ಮುರುಗೇಶ್ ನಿರಾನಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ (ಸಂಗ್ರಹ ಚಿತ್ರ)
ಮಾಜಿ ಸಚಿವ ಮುರುಗೇಶ್ ನಿರಾನಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದದ ಬಳಿಕ ಇದೀಗ ಮಾಜಿ ಸಚಿವ ಮುರುಗೇಶ್ ನಿರಾನಿ ಅವರು ನೀಡಿರುವ ದುಬಾರಿ ಕಾರು ಉಡುಗೊರೆ ವಿವಾದವೊಂದನ್ನು ಹುಟ್ಟುಹಾಕಿದೆ.

ಬಿಜೆಪಿ ರಾಜ್ಯಧ್ಯಕ್ಷರಾಗಿ ಯಡಿಯೂರಪ್ಪ ಅವರು ಆಯ್ಕೆಯಾಗುತ್ತಿದ್ದಂತೆ ನಿರಾನಿಯವರು ಬರೋಬ್ಬರಿ ರು. 1.16 ಕೋಟಿ ಹಣದ ದುಬಾರಿ ಕಾರೊಂದನ್ನು ನೀಡಿರುವುದು ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ದುಬಾರಿ ಬೆಲೆ ಕಾರನ್ನು ಉಡುಗೊರೆಯಾಗಿ ನೀಡಿರುವ ನಿರಾನಿಯವರು ರೈತರಿಗೆ ರು.180 ಕೋಟಿ ಬಾಕಿ ಹಣವನ್ನು ಕಬ್ಬು ಬೆಳಗಾರರಿಗೆ ನೀಡಬೇಕಿದೆ. ಇಂತಹ ಸಮಯದಲ್ಲಿ ರೈತರಿಗೆ ಪಾವತಿಸದ ನಿರಾನಿಯವರು ಯಡಿಯೂರಪ್ಪ ಅವರಿಗೆ ದುಬಾರಿ ಕಾರು ಉಡುಗೊರೆಯಾಗಿ ನೀಡಿರುವುದು ರೈತರ ಕಣ್ಣು ಕೆಂಪಾಗುವಂತೆ ಮಾಡಿದೆ.

ನಿರಾನಿಯವರ ದುಬಾರಿ ಕಾರು ಉಡುಗೊರೆ ಕುರಿತಂತೆ ಇದೀಗ ಕಾಂಗ್ರೆಸ್ ನಾಯಕರು ಹಲವು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದು, ಮುರುಗೇಶ್ ನಿರಾನಿಯವರಿಗೆ ಕಬ್ಬು ಬೆಳೆಗಾರರಿಗೆ ನೀಡಲು ಹಣವಿಲ್ಲ. ಆದರೆ, ಯಡಿಯೂರಪ್ಪ ಅವರಿಗೆ ಕಾರು ಗಿಫ್ಟ್ ಮಾಡಲು ಹಣವಿದೆ. ಬಿಜೆಪಿ ನಾಯಕರ ಮನಸ್ಥಿತಿ ಹೇಗಿದೆಯೆಂಬುದನ್ನು ಇದರಿಂದಲೇ ಅರಿಯಬಹದು ಎಂದು ವಿ.ಎಸ್ ಉಗ್ರಪ್ಪ ಅವರು ಹೇಳಿದ್ದಾರೆ.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಮಾರುತಿ ಮನ್ಪಾಡೆ ಅವರು ಮಾತನಾಡಿ, ರೈತರ ಬಾಕಿ ಹಣವನ್ನು ನೀಡದ ಒಬ್ಬ ವ್ಯಕ್ತಿಯಿಂದ ಕಾರನ್ನು ಉಡುಗೊರೆಯಾಗಿ ಪಡೆದಿರುವ ಯಡಿಯೂರಪ್ಪ ಅವರು ತಾವೊಬ್ಬ ರೈತ ಎಂದು ಹೇಗೆ ಹೇಳಿಕೊಳ್ಳುತ್ತಾರೆ? ವಿಚಾರದಿಂದ ನಿಜಕ್ಕೂ ಬೇಸರವಾಗಿದೆ ಎಂದು ಹೇಳಿದ್ದಾರೆ.
 
ರೈತರ ಬಾಕಿ ಹಣವನ್ನು ನೀಡದ ವ್ಯಕ್ತಿಯಿಂದ ಕಾರನ್ನು ಉಡುಗೊರೆಯಾಗಿ ಪಡೆದು ಇದೇ ಕಾರಿನಿಂದ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರನ್ನು ಭೇಟಿಯಾಗಲು ಯಡಿಯೂರಪ್ಪ ಅವರ ಹೋದರೆ ಆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ. ಇಂತಹ ನಾಯಕನ್ನು ಜನರು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.

ನಿರಾನಿ ಶುಗರ್ಸ್, ಇನ್ನಿತರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಖಾನೆಯನ್ನು ನಿರ್ವಹಿಸುತ್ತಿರುವ ರಾಜಕಾರಣಿಗಳು ಕಬ್ಬು ಬೆಳೆಗಾರರಿಗೆ ರು.2 ಸಾವಿರ ಕೋಟಿ ಹಣವನ್ನು ಪಾವತಿ ಮಾಡಬೇಕಾಗಿದೆ. ಇಂದಿಗೂ ರೈತರು ತಮಗೆ ಬರಬೇಕಿರುವ ಹಣಕ್ಕಾಗಿ ಪ್ರತೀ ನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಾಕಿ ಹಣವನ್ನು ಪಡೆಯಲು ಸಾಧ್ಯವಾಗದೇ ಇಂದಿಗೂ ಹಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನು ಕಬ್ಬು ಬೆಳೆಗಾರರ ಸಂಕಷ್ಟವನ್ನು ನೋಡುತ್ತಿದ್ದರೂ ಸರ್ಕಾರ ಕೂಡ ಯಾವುದೇ ಪ್ರಯತ್ನಗಳನ್ನು ಮಾಡದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com