ಸಿಎಂ ಬದಲಾವಣೆ ಎಲ್ಲಾ ಸುಳ್ಳು: ಸಿದ್ದರಾಮಯ್ಯ ಸ್ಪಷ್ಟನೆ

ಕಾಂಗ್ರೆಸ್ ಹೈಕಮಾಂಡ್ ನಿಂದ ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ವದಂತಿಯಾಗಿದ್ದು, ಎಲ್ಲಾ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್ ಹೈಕಮಾಂಡ್ ನಿಂದ ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ವದಂತಿಯಾಗಿದ್ದು, ಎಲ್ಲಾ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ನನ್ನ ವಿರುದ್ಧ ಇರುವ ವೈರಿಗಳಿಗೆ ನಾನು ದೊಡ್ಡ ಸ್ಥಾನದಲ್ಲಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಗಾಳಿಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಶಾಸಕರು ನನ್ನ ವಿರುದ್ಧವಿದ್ದಾರೆಂದು ವೀರಪ್ಪ ಮೊಯ್ಲಿಯವರು ಏನಾದರೂ ಹೇಳಿದ್ದಾರೆಯೇ? ಆಧಾರವಿಲ್ಲದ ಗಾಳಿ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಅಲ್ಲದೆ, ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, ಮಾಧ್ಯಮಗಳ ವರದಿಗಾರರು ತಮಗೆ ಇಷ್ಟ ಬಂದ ರೀತಿಯಲ್ಲಿ ವದಂತಿಗಳಿಗೆ ರೆಕ್ಕೆಪುಕ್ಕಗಳನ್ನು ಕೊಡುತ್ತಿದ್ದಾರೆ. ಅಧಿಕಾರದ ಅವಧಿ ಪೂರ್ಣವಾಗುವವರೆಗೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಹೈಕಮಾಂಡ್ ಕೂಡ ಸ್ಪಷ್ಟನೆ ನೀಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಂಭವಿಸಿರುವ ಬರಗಾಲ ಮುಕ್ತತೆ ಕುರಿತಂತೆ ಸರ್ಕಾರ ಪರಿಶ್ರಮ ಪಡುತ್ತಿದ್ದರೆ, ವಿಪಕ್ಷಗಳಿಗೆ ಮುಖ್ಯಮಂತ್ರಿ ಬದಲಾವಣೆಯ ಚಿಂತೆಯಾಗಿದೆ. ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಬದಲು ವಿಪಕ್ಷಗಳು ಬರಪರಿಹಾರಕ್ಕಾಗಿ ಸರ್ಕಾರದೊಂದಿಗೆ ಕೈ ಜೋಡಿಸಲಿ ಎಂದು ಸಲನೆಯನ್ನು ನೀಡಿದ್ದಾರೆ.

ಇದೇ ವೇಳೆ ಮಹಾದಾಯಿ ನೀರು ಹಂಚಿಕೆ ವಿವಾದ ಕುರಿತಂತೆ ಮಾತನಾಡಿರುವ ಅವರು, ಈಗಾಗಲೇ ಕರ್ನಾಟಕದ ಪರವಾಗಿ ಹಿರಿಯ ಕಾನೂನು ತಜ್ಞ ನಾರಿಮನ್ ಅವರನ್ನು ನಿಯೋಜಿಸಲಾಗಿದೆ. ಈ ಬಗೆಗಿನ ನ್ಯಾಯಾಲಯ ವಿಚಾರಣೆ ಕುರಿತಂತೆ ನನಗೆ ಅರಿವಿಲ್ಲ. ಕಾನೂನು ಸಲಹೆಗಾರರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇನೆಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ ಮಾನ್ಸೂನ್ ಮಳೆ ಬರುವುದಾಗಿ ವಿಶ್ವಾಸವಿದೆ. ಈ ಸಂದರ್ಭವನ್ನು ಸರ್ಕಾರ ಉಪಯೋಗಿಸಿಕೊಳ್ಳಲಿದೆ. ಉಪ ಜಿಲ್ಲಾಧಿಕಾರಿಗಳಿ ಬಳಿ ಸಾಕಷ್ಟು ಹಣವಿದ್ದು, ಅವರಿಗೆ ಮನ್ರೇಗಾ ಯೋಜನೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ. ಅಲ್ಲದೆ, ರೈತರ ಪರಿಹಾರ ವಿತರಣೆ ಕುರಿತಂತೆ ವಿಳಂಬ ನೀತಿಯನ್ನು ಅನುಸರಿಸಿದ್ದ ಆದಾಯ ಅಧಿಕಾರಿಗಳ ಅಮಾನತನ್ನು ಸಮರ್ಥಿಸಿಕೊಂಡಿದ್ದಾರೆ.

ನಂತರ ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಮಾಡಿದ್ದ ಆರೋಪಗಳ ವಿರುದ್ಧ ಕಿಡಿಕಾರಿರುವ ಅವರು, ಜೆಡಿ(ಎಸ್) ನಾಯಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಜೆಡಿ(ಎಸ್) ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರು ಏನು ಮಾಡಿದ್ದರು ಎಂಬುದು ರಾಜ್ಯದ ಜನತೆಗೆ ಗೊಡತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳುವುದು ಹೊಸ ವಿಷಯವಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com