ಪಾಕ್ ಪರ ರಮ್ಯಾ ಹೇಳಿಕೆ: ಕಾಂಗ್ರೆಸ್ಸಿಗರಿಗೆ ಪಾಕ್ ಹೊಗಳುವ ಹವ್ಯಾಸವಿದೆ- ಬಿಜೆಪಿ
ಬೆಂಗಳೂರು: ಕಾಂಗ್ರೆಸ್ ನಾಯಕಿ ರಮ್ಯಾ ಅವರು ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿರುವುದು ಆಶ್ಟರ್ಯವೇನು ಉಂಟು ಮಾಡಿಲ್ಲ. ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನವನ್ನು ಹೊಗಳುವ ಹವ್ಯಾಸ ಈ ಮೊದಲಿನಿಂದಲೂ ಇದೆ ಎಂದು ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರು ಹೇಳಿದ್ದಾರೆ.
ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ನಾಯಕರು ಪಾಕಿಸ್ತಾನವನ್ನು ಹೊಗಳುತ್ತಿರುವುದು ದೇಶಕ್ಕೆ ಹೊಸದೇನಲ್ಲ. ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನವನ್ನು ಹೊಗಳುವ ಹವ್ಯಾಸ ಈ ಮೊದಲಿನಿಂದಲೂ ಇದೆ ಎಂದು ಹೇಳಿದ್ದಾರೆ.
ಮಾಜಿ ಸಂಸದೆ ನೀಡಿರುವ ಹೇಳಿಕೆಯನ್ನು ನಿರ್ಲಕ್ಷಿಸಬೇಕಿದೆ. ರಮ್ಯಾ ಅವರು ಯಾವ ಆಯಾಮದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂಬುದನ್ನು ತಿಳಿಯಬೇಕಿದೆ. ಸುಖಾಸುಮ್ಮನೆ ನಾವು ಮಾಜಿ ಸಂಸದೆಗೆ ಪ್ರಚಾರವನ್ನು ನೀಡುತ್ತಿದ್ದೇವೆಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿದ್ದ ರಮ್ಯಾ ಅವರು, ಪಾಕ್ ಕುರಿತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಸರಿಯಲ್ಲ. ಪಾಕಿಸ್ತಾನ ನರಕವಲ್ಲ, ಪಾಕಿಸ್ತಾನದವರು ಒಳ್ಳೆಯವರೆಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ರಮ್ಯಾ ವಿರುದ್ಧ ಹಲವು ಪ್ರತಿಭಟನೆಗಳು ನಡೆಯುತ್ತಿದೆ.

