
ರಾಮನಗರ: ಜೆಡಿಎಸ್ ಪರಿವಾರದ ಪ್ರಮುಖ ಮತ್ತು ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯ ಸದ್ಯದಲ್ಲಿಯೇ ಪಕ್ಷ ತೊರೆಯಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಶನಿವಾರ ಕನಕಪುರದ ಬೋಳಾರೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಸಿಂಧ್ಯ ಪಾಲ್ಗೊಂಡಿದ್ದು, ಊಹಾಪೋಹಗಳಿಗೆ ಮತ್ತಷ್ಟು ಆಸ್ಪದ ನೀಡಿದಂತಾಗಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಿಂಧ್ಯ ತಮ್ಮ ಒಂದು ಕಾಲದ ಎದುರಾಳಿ ಮತ್ತು ಹಾಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅಲ್ಲದೆ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡುವ ಮೂಲಕ ಸಿಂಧ್ಯ ಜೆಡಿಎಸ್‌ನಿಂದ ದೂರವಾಗುವ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜನತಾ ಪರಿವಾರದಲ್ಲಿ ಗುರುತಿಸಿಕೊಂಡು ಬಿಎಸ್‌ಪಿಗೆ ಸೇರ್ಪಡೆಯಾಗಿ, ಮತ್ತೆ ಜೆಡಿಎಸ್‌ಗೆ ಬಂದಿದ್ದ ಸಿಂಧ್ಯ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದ, ಸಿಂಧ್ಯ ಇದೇ ಮೊದಲ ಬಾರಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕ್ರಮದಲ್ಲಿ.
Advertisement