
ಬೆಂಗಳೂರು: ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಹಿಂದೆ ಮಾಜಿ ಸಚಿವ ಜಾರ್ಜ್ ಅವರ ಹೆಸರು ಕೇಳಿಬಂದಿದ್ದು, ಕೂಡಲೇ ಜಾರ್ಜ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಆಗ್ರಹಿಸಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಗಣಪತಿಯವರು ಆತ್ಮಹತ್ಯೆಗೂ ಮುನ್ನ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಜಾರ್ಜ್ ಅವರ ಹೆಸರನ್ನು ಹೇಳಿದ್ದಾರೆ. ಅಧಿಕಾರಿಗಳಿಗೆ ಜಾರ್ಜ್ ಅವರು ಕಿರುಕುಳ ನೀಡಿರುವುದು ಬಹಿರಂಗವಾಗಿದೆ. ಕೂಡಲೇ ಜಾರ್ಜ್ ಅವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಹೇಳಿದ್ದಾರೆ.
ಮಂಗಳೂರು ಕೊಡಗು ಮೂಲದ, ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ. ಗಣಪತಿ (45) ಅವರು ಗುರುವಾರ ಸಂಜೆ ಆತ್ಮಹತ್ಮೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಗಣಪತಿಯವರು ಖಾಸಗಿ ವಾಹನಿಯೊಂದಕ್ಕೆ ಸಂದರ್ಶನ ನೀಡಿದ್ದರು.
ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಹೇಳಿಕೊಂಡಿದ್ದರು ಅಲ್ಲದೆ, ಸಾವಿಗೂ ಮುನ್ನ ಡೆತ್ ನೋಟ್ ನ್ನು ಬರೆದಿಟ್ಟಿದ್ದರು. ಡೆತ್ ನೋಟ್ ನಲ್ಲಿರುವ ಅಂಶವನ್ನು ಬಹಿರಂಗಗೊಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಎಲ್ಲಾ ಅಂಶಗಳು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Advertisement