ತಾರಕ್ಕೇರಿದ ಅತೃಪ್ತರ ನಾಯಕತ್ವ ಬದಲಾವಣೆಯ ಕೂಗು

ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಕೂಗು ತಾರಕ್ಕೇರಿದ್ದು, ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ವೇದಿಕೆ ಸಿದ್ಧವಾಗುತ್ತಿರುವಂತಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಕೂಗು ತಾರಕ್ಕೇರಿದ್ದು, ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ವೇದಿಕೆ ಸಿದ್ಧವಾಗುತ್ತಿರುವಂತಿದೆ.

ಸಂಪುಟ ಪುನಾರಚನೆಯಿಂದ ಉಂಟಾದ ಭಿನ್ನಮತದ ಸಮಸ್ಯೆ ದಿನೇ ದಿನೇ ಉಲ್ಭಣಗೊಳ್ಳುತ್ತಿದ್ದು, ಅತೃಪ್ತ ಶಾಸಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಂತೆ ಅತೃಪ್ತ ಶಾಸಕರ ಚಿತ್ತ ಇದೀಗ ನಾಯಕತ್ವ ಬದಲಾವಣೆಯತ್ತ ಹರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ಕಸರತ್ತು ನಡೆಸುತ್ತಿರುವ ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ನಾಯಕತ್ವ ವಹಿಸಿಕೊಳ್ಳುವಂತೆ ಮಾತುಕತೆ ನಡೆಸಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಮಾಜಿ ಸಚಿವ ಹಾಗೂ ಶಾಸಕ ಎ.ಬಿ. ಮಾಲಕ ರೆಡ್ಡಿ ಅವರು, ಎಸ್.ಎಂ. ಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದು, ಕೃಷ್ಣ ಅವರೂ ಕೂಡ ನಮ್ಮ ಕೂಗನ್ನು ಕೇಳಿಸಿಕೊಂಡಿದ್ದಾರೆ. ಅಲ್ಲದೆ, ನಮಗೆ ಬೆಂಬಲ ಸೂಚಿಸಿದ್ದಾರೆಂದು ಹೇಳಿದ್ದಾರೆ.

ಮೂಲಗಳು ತಿಳಿಸಿರುವ ಪ್ರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಂತೆ ಎಸ್.ಎಂ.ಕೃಷ್ಣ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಅತೃಪ್ತಿ ಶಾಸಕರಿಗೆ ಬೆಂಬಲ ಸೂಚಿಸಲಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ, ನಾಯಕತ್ವ ಬದಲಾವಣೆಗೂ ಆಗ್ರಹಿಸಲಿದ್ದಾರೆಂದು ತಿಳಿದುಬಂದಿದೆ.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅತೃಪ್ತ ಶಾಸಕರು, ನಾವು ಪಕ್ಷದ ವಿರುದ್ಧವಿಲ್ಲ. ನಮಗೆ ನಾಯಕತ್ವ ಬದಲಾವಣೆಯ ಅಗತ್ಯವಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2018ರ ವಿಧಾನಸಭಾ ಚುನಾವಣೆ ನಡೆಯಬಾರದು ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೂಡ ಕಿಡಿಕಾರಿರುವ ಅವರು, ಖರ್ಗೆಯವರು ತಮ್ಮ ಮಗನನ್ನು ಸಚಿವನಾಗಿ ಮಾಡುವ ಸಲುವಾಗಿ ಹಿರಿಯ ಶಾಸಕರನ್ನು ತಿರಸ್ಕರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇನ್ನು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರೂ ಕೂಡ ರಾಜ್ಯದ ಬೆಳವಣಿಗೆ ಕುರಿತಂತೆ ಬೇಸರ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ನಾಯಕರನ್ನು ಸಂಪುಟದಿಂದ ತೆಗೆದುಹಾಕುವುದಕ್ಕೂ ಮುನ್ನ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಅದನ್ನು ಅವರು ಮಾಡಿಲ್ಲ. ಇದೀಗ ರಾಜ್ಯದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಹಾಗೂ ದಿಗ್ವಿಜಯ್ ಸಿಂಗ್ ಅವರೇ ನಿಭಾಯಿಸಲಿ ಎಂದು ಹೇಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಎಸ್.ಎಂ. ಕೃಷ್ಣ ಅವರು ಮುಂಬೈನಲ್ಲಿದ್ದು, ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಎಂ.ಎಸ್.ಕೃಷ್ಣ ಅವರು ನಗರಕ್ಕೆ ಭೇಟಿ ನೀಡುತ್ತಿದ್ದಂತೆಯೇ ಅತೃಪ್ತ ಶಾಸಕರು ಕೃಷ್ಣ ಅವರನ್ನು ಭೇಟಿಯಾಗಿ ಮುಂದಿನ ನಿರ್ಧಾರಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com