

ಬೆಳಗಾವಿ: ಆಬ್ ಕಿ ಬಾರ್ ಕುಮಾರಸ್ವಾಮಿ ಎಂಬ ಘೋಷಣೆಯಡಿ ಮುಂದಿನ ವಿಧಾನ ಸಭೆ ಚುನಾವಣೆಗೆ ಹೋಗಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಮೇಲಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ.
ಬರ ಹಾಗೂ ನೋಟು ನಿಷೇಧದಿಂದ ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ, ಪಡೆದಿರುವ ಸಾಲದಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೊಳಗಾಗಬಾರದು, ಸರ್ಕಾರ ದಿವಂಗತ ದೇವರಾಜ ಅರಸು ಕಾಲದಲ್ಲಿ ಬರ ನಿರ್ವಹಣೆಗೆ ತೆಗೆದುಕೊಂಡಂತ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಬೆಳೆ ನಷ್ಟವಾದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರೈತರಿಂದ ಕೊಂಡು ಕೊಂಡ ಸಾಮಾಗ್ರಿಗಳಿಗೆ ಹಣ ನೀಡಲು ವ್ಯಾಪಾರಿಗಳ ಬಳಿ ಹಣವಿಲ್ಲ, 500 ಹಾಗೂ 1000 ನೋಟು ನಿಷೇಧದಿಂದ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಮುಚ್ಚಲಾಗಿದೆ ಎಂದರು.
ಅಭಿವೃದ್ಧಿ ಕಾರ್ಯಗಳಿಗೆ ಹಣ ಹೂಡುವುದನ್ನು ಸರ್ಕಾರ ನಿಲ್ಲಿಸಿ ಬೆಳೆ ನಾಶ ವಾದ ರೈತನಿಗೆ 25 ಸಾವಿರು, ರು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೊನೆ ಪಕ್ಷ ರೈತರ ರಕ್ಷಣೆಗಾದರೂ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.