ದಕ್ಷಿಣ ರಾಜ್ಯಗಳ ಮಹಾದ್ವಾರ ಕರ್ನಾಟಕದಲ್ಲಿ ಮುಗ್ಗರಿಸಿದ ಬಿಜೆಪಿ

ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷ ಜಯ ಸಾಧಿಸುವುದು ಭಾರತೀಯ ರಾಜಕೀಯದಲ್ಲಿ ಸರ್ವೇ ಸಾಮಾನ್ಯ ವಿದ್ಯಮಾನವಾಗಿದೆ, ಆದರೆ ...
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ನಂಜನಗೂಡು- ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿನ ಸೋಲು ಬಿಜೆಪಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ.
ಕರ್ನಾಟಕದ ಮೂಲಕ ದಕ್ಷಿಣ ರಾಜ್ಯಗಳಲ್ಲಿ ತಮಲವನ್ನು ಅರಳಿಸಬೇಕೆಂಬ ಮಹಾದಾಸೆ ಹೊಂದಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ, ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷ ಜಯ ಸಾಧಿಸುವುದು ಭಾರತೀಯ ರಾಜಕೀಯದಲ್ಲಿ ಸರ್ವೇ ಸಾಮಾನ್ಯ ವಿದ್ಯಮಾನವಾಗಿದೆ, ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಮತಗಳ ಅಂತರ ಬಿಜೆಪಿಯ ಚಿಂತೆಗೆ ಕಾರಣವಾಗಿದೆ.
ಸೋಲಿನಿಂದ ಆಘಾತಗೊಂಡಿರುವ ಬಿಜೆಪಿ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನಿಸುವಂತಾಗಿದೆ. ಬಿಜೆಪಿಯಿಂದ ಕೆಲ ಕಾಲ ದೂರವಿದ್ದು ತಮ್ಮದೇ ಪಕ್ಷವೊಂದನ್ನು ಕಟ್ಟಿಕೊಂಡಿದ್ದ ಯಡಿಯೂರಪ್ಪ ಅವರನ್ನು ಮರಳಿ  ಕರೆ ತಂದು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ ಎನ್ನಲಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ -150, ಅಂದರೆ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಯಡಿಯೂರಪ್ಪ ಪಣ ತೊಟ್ಟಿದ್ದಾರೆ. 
ಉಪ ಚುನಾವಣೆ ಪ್ರಚಾರದ ವೇಳೆ ಇದು ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವಿನ ನೇರ ಹೋರಾಟ ಎಂದು ಯಡಿಯೂರಪ್ಪ ಹೇಳಿದ್ದರು, ಸಿದ್ದರಾಮಯ್ಯ ಸಂಪುಟದಿಂದ ತೆಗೆದು ಹಾಕಲ್ಪಟ್ಟಿದ್ದ ದಲಿತ ಮುಖಂಡ ಶ್ರೀನಿವಾಸ್ ಪ್ರಸಾದ್ ನಂಜನಗೂಡಿಂದ ಸ್ಪರ್ಧಿಸಿದ್ದು ಬಿಜೆಪಿ ಸೋಲಿಗೆ ಕಾರಣವಾಯಿತು. ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ನೀಡುವುದು ಅನಾವಶ್ಯಕವಾಗಿತ್ತು, ಅಂದರೆ ನಂಜನಗೂಡಿಗೆ ಉಪ ಚುನಾವಣೆ ಅಗತ್ಯವಿರಲಿಲ್ಲ, ಆದರೆ ಗುಂಡ್ಲುಪೇಟೆಯಲ್ಲಿ ಮಹಾದೇವ ಪ್ರಸಾದ್ ನಿಧನದಿಂದಾಗಿ ಉಪ ಚುನಾವಣೆ ಅನಿವಾರ್ಯವಾಗಿತ್ತು.
ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಬಹುತೇಕವಾಗಿ ಲಿಂಗಾಯಿತ ಮತಗಳಿವೆ, ಹೀಗಾಗಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ ತಮ್ಮ ಪಕ್ಷದ ಪ್ರಮುಖ ನಾಯಕರಾದ ವಿ ಸೋಮಣ್ಣ, ಆರ್ .ಅಶೋಕ್, ಶೋಭಾ ಕರಂದ್ಲಾಜೆ ಮತ್ತಿತರರ ಜೊತೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಸುತ್ತಿದರು.
ಶ್ರೀನಿವಾಸ್ ಪ್ರಸಾದ್ ದಲಿತರ ಹೆಮ್ಮೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ ಎನ್ನುವಂತೆ ಬಿಂಬಿಸಿದರು. 2018ರ ವಿಧಾನಸಭೆ ಚುನಾವಣೆಗೆ ಉಪ ಚುನಾವಣೆ ಸೆಮಿ ಫೈನಲ್ ಎಂದೇ ಬಿಜೆಪಿ ಪರಿಗಣಿಸಿತ್ತು. ಆದರೆ ಲಿಂಗಾಯತರ ಜೊತೆ ದಲಿತರು ಸೇರಿದರೇ ಪಕ್ಷ ಜಯಸಾಧಿಸುತ್ತದೆ ಎಂಬ ಬಿಎಸ್ ವೈ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು, ಶ್ರೀನಿವಾಸ್ ಪ್ರಸಾದ್ 21 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. 
ಎರಡು ಕ್ಷೇತ್ರಗಳಲ್ಲಿನ ಸೋವು ಯಡಿಯೂರಪ್ಪ ಸಾಮರ್ಥ್ಯವನ್ನು ಪ್ರಶ್ನೆಗೀಡು ಮಾಡಿದೆ. ಯಡಿಯೂರಪ್ಪ ಕಾರ್ಯವೈಖರಿ ಮತ್ತೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗುತ್ತದೆಯೇ ಎಂದು ಹೈಕಮಾಂಡ್ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. 
ಯಡಿಯೂರಪ್ಪ ಏಕಪಕ್ಷೀಯ ವಾದ ವರ್ತನೆ, ಪಕ್ಷದ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಿಲ್ಲಾಧ್ಯಶ್ರರ ನೇಮಕ ಪಕ್ಷದೊಳಗೆ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿತ್ತು, ಹಾಗಾಗಿ ಉಪ ಚುನಾವಣೆ ಫಲಿತಾಂಶ ವನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಬಿಜೆಪಿಯ ಉಪ ಚುನಾವಣೆ ಕಾರ್ಯತಂತ್ರ, ಯಡಿಯೂರಪ್ಪ ನಾಯಕತ್ವ, ಜಾತಿ ಲೆಕ್ಕಾಚಾರ, ಎರಡನೇ ಸಾಲಿನ ನಾಯಕರ ಕಡೆಗಣನೆ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೈಕಮಾಂಡ್ ಚರ್ಚಿಸಬೇಕಾಗಿದೆ. ದಕ್ಷಿಣ ರಾಜ್ಯದಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಮುಂದಿನ ಚುನಾವಣೆಗೆ ವ್ಯವಸ್ಥಿತ ಯೋಜನೆ ರೂಪಿಸಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com