ಯಡಿಯೂರಪ್ಪ ಮನೆಯಲ್ಲಿ ದಲಿತ ಕುಟುಂಬಗಳಿಗೆ ಆತಿಥ್ಯ: ರೇಷ್ಮೆ ಸೀರೆ, ಪಂಚೆ, ಶರ್ಟ್‌ ಉಡುಗೊರೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ದಲಿತ ಕುಟುಂಬಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ..
ದಲಿತ ಕುಟುಂಬಗಳೊಂದಿಗೆ ಯಡಿಯೂರಪ್ಪ ಸಹ ಭೋಜನ
ದಲಿತ ಕುಟುಂಬಗಳೊಂದಿಗೆ ಯಡಿಯೂರಪ್ಪ ಸಹ ಭೋಜನ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ದಲಿತ ಕುಟುಂಬಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮೇ ಮತ್ತು ಜೂನ್‌ ತಿಂಗಳಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನದ ವೇಳೆ ತಮಗೆ ಉಪಹಾರ ವ್ಯವಸ್ಥೆ ಮಾಡಿದ್ದ 33 ದಲಿತ ಕುಟುಂಬಗಳ ಸದಸ್ಯರಿಗೆ ಆತಿಥ್ಯ ನೀಡಲಾಯಿತು. 
ಯಡಿಯೂರಪ್ಪ ಅವರು ಡಾಲರ್ಸ್‌ ಕಾಲೋನಿಯ ತಮ್ಮ ಧವಳಗಿರಿ ನಿವಾಸಕ್ಕೆ ಭೋಜನ ಕೂಟಕ್ಕೆ ಆಹ್ವಾನಿಸಿದ್ದು, ಅದರಂತೆ ಈ ಕುಟುಂಬಗಳ ಸುಮಾರು 100 ಸದಸ್ಯರು ಸೋಮವಾರ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದರು.
ಹೋಳಿಗೆ, ಜಹಂಗೀರ್, ಪೂರಿ, ಸಾಗು, ಬದನೇಕಾಯಿ ಪಲ್ಯ, ಚಿತ್ರಾನ್ನ, ಅನ್ನ ಸಾಂಬಾರ್‌ ಸೇರಿ 18 ಬಗೆಯ ಖಾದ್ಯಗಳನ್ನು ಯಡಿಯೂರಪ್ಪ ಅವರ ಮನೆಯಲ್ಲಿಯೇ ಸಿದ್ಧಪಡಿಸಲಾಗಿತ್ತು. ಮನೆಯೊಳಗೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಗೋವಿಂದ ಕಾರಜೋಳ ಹಾಗೂ ಮನೆಗೆ ಬಂದಿದ್ದ ಅತಿಥಿಗಳ ಜತೆ ಪಂಕ್ತಿಯಲ್ಲಿ ಕುಳಿತು ಯಡಿಯೂರಪ್ಪ ಅವರೂ ಊಟ ಮಾಡಿದರು. 
ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿ.ವೈ.ರಾಘವೇಂದ್ರ ಕೈಯಾರೆ ಊಟ ಬಡಿಸಿದರು. 200ಕ್ಕೂ ಹೆಚ್ಚು ಜನ ಬಂದಿದ್ದರಿಂದ ಎರಡು–ಮೂರು ಪಂಕ್ತಿಗಳಲ್ಲಿ ಊಟ ಬಡಿಸಲಾಯಿತು.
ಅತಿಥಿಗಳಾಗಿ ಬಂದಿದ್ದ ಮಹಿಳೆಯರಿಗೆ ಸೀರೆ, ಹೂ, ಹಣ್ಣು ಮತ್ತು ಪುರುಷರಿಗೆ ಪಂಚೆ–ಶರ್ಟ್‌, ಶಲ್ಯವನ್ನು ಉಡುಗೊರೆ ನೀಡಲಾಯಿತು. ಬಳಿಕ ಎರಡು ಬಸ್‌ಗಳಲ್ಲಿ ಅವರನ್ನು ಕರೆದೊಯ್ದು ವಿಧಾನಸೌಧ, ಕಬ್ಬನ್ ಉದ್ಯಾನ, ಲಾಲ್‌ಬಾಗ್ ಮತ್ತು ಇಸ್ಕಾನ್‌ ದೇವಸ್ಥಾನ ತೋರಿಸಲಾಯಿತು.
ತಮ್ಮ ಮನೆಗೆ ಬಂದ ದಲಿತ ಕುಟುಂಬದ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಯಡಿಯೂರಪ್ಪ, "ಇದು ನನ್ನ ಜೀವನದಲ್ಲಿ ಮರೆಯಲಾಗದ ಶುಭ ದಿನ. ನಿಮ್ಮ ಮನೆಗೆ ಬಂದಾಗ ನೀವು ತೋರಿಸಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ನನ್ನನ್ನು ಮನೆಗೆ ಬರಮಾಡಿಕೊಳ್ಳದಂತೆ ಕೆಲವು ಪುಡಾರಿಗಳು ಹೆದರಿಸಿದರೂ, ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದೆ ಪ್ರೀತಿಯಿಂದ ಕರೆದು ಉಪಾಹಾರ ಕೊಟ್ಟಿದ್ದೀರಿ. ಜೀವನದ ಕೊನೆಯುಸಿರು ಇರುವವರೆಗೂ ಇದನ್ನು ಮರೆಯುವುದಿಲ್ಲ. ನನಗೆ ಊಟ ಹಾಕಿದ ಎಲ್ಲರ ಮಾಹಿತಿಯನ್ನೂ  ಪಡೆದುಕೊಂಡಿದ್ದೇನೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ' ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com