

ಬೆಂಗಳೂರು: ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಮಾತ್ರವೇ ತೆರಿಗೆ ಇಲಾಖೆ ದಾಳಿ ಮತ್ತು ಬಂಧನಗಳು ನಡೆಯುತ್ತಿವೆ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಆಯೋಜಿಸಿದ್ದ ಜನ ವೇದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕ, ತಮಿಳುನಾಡನ್ನು ಮಾತ್ರ ಏಕೆ ಗುರಿಯಾಗಿಸಿಕೊಳ್ಳಲಾಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಕಪ್ಪು ಹಣವಿಲ್ಲವೆ? ಅಲ್ಲಿ ಏಕೆ ಆದಾಯ ತೆರಿಗೆ ದಾಳಿ ನಡೆಯುತ್ತಿಲ್ಲ. ಅದರಲ್ಲೂ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಹಾಗಿದ್ದರೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,ಮಾಜಿ ಡಿಸಿಎಂ ಈಶ್ವರಪ್ಪ, ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಜನಾರ್ದನ ರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದವು, ಅದರಲ್ಲಿ ಕೆಲವು ನಾಯಕರು ಜೈಲುವಾಸ ಕೂಡ ಅನುಭವಿಸಿ ಬಂದಿದ್ದಾರೆ. ಇದು ಅಮಿತ್ ಶಾ ಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, 75 ವರ್ಷದ ಆರ್ಥಿಕ ವ್ಯವಸ್ಥೆಯನ್ನು ಕೇವಲ 50 ದಿನಗಳಲ್ಲಿ ಬದಲಾಯಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಿದ್ದರೇ ದೇಶದಲ್ಲಿ ಎಷ್ಟು ಕಪ್ಪು ಹಣವಿದೆ, ಭಯೋತ್ಪಾದಕರ ಬಳಿ ಎಷ್ಟು ಹಣವಿದೆ ಎಂಬುದಕ್ಕೆ ವಿವರಣೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.