ಗುಜರಾತ್ ಶಾಸಕರು ಜೀವಭಯದಿಂದ ಬೆಂಗಳೂರಿಗೆ ಬಂದಿದ್ದಾರೆ: ಕಾಂಗ್ರೆಸ್

ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಜೀವ ಭಯವಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ ಎಂದು....
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಶಕ್ತಿ ಸಿಂಗ್ ಗೋಹಿಲ್
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಶಕ್ತಿ ಸಿಂಗ್ ಗೋಹಿಲ್
ಬೆಂಗಳೂರು: ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಜೀವ ಭಯವಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಎಐಸಿಸಿ ವಕ್ತಾರ ಶಕ್ತಿ ಸಿಂಗ್ ಗೋಹಿಲ್ ಅವರು ಭಾನುವಾರ ಹೇಳಿದ್ದಾರೆ.
ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಬಿಡದಿ ಬಳಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ನ 42 ಕಾಂಗ್ರೆಸ್ ಶಾಸಕರನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಿ ಮಾತನಾಡಿದ ಗೋಹಿಲ್ ಅವರು, ಕೆಲವೇ ಕೆಲವು ಮತಕ್ಕಾಗಿ ತಮ್ಮನ್ನು ಅಪಹರಿಸುವ ಅಥವಾ ಹತ್ಯೆ ಮಾಡುವ ಭಯದಿಂದ ಶಾಸಕರು ಇಲ್ಲಿಗೆ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಇಲ್ಲಿ ನಮಗೆ ಸೂಕ್ತ ಭದ್ರತೆ ಸಿಗಬಹುದು ಎಂಬ ಉದ್ದೇಶದಿಂದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ ಎಂದು ಗೋಹಿಲ್ ತಿಳಿಸಿದ್ದಾರೆ.
ನಾನು ಕಳೆದ ರಾತ್ರಿಯಿಂದ ರೆಸಾರ್ಟ್‌ನಲ್ಲಿದ್ದೇನೆ. ನಾವು ಒಂದು ಕುಟುಂಬದಂತೆ ವಾಸಿಸುತ್ತೇವೆ. ನಮ್ಮ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಬಿಜೆಪಿಯವರು ಆಂತರಿಕ ಭಿನ್ನಮತ ಇದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಗೋಹಿಲ್ ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ. 22 ಶಾಸಕರನ್ನು ರಾಜಿನಾಮೆ ಕೊಡಿಸುವ ಬಿಜೆಪಿ ಯತ್ನ ಸಫಲವಾಗುವುದಿಲ್ಲ ಎಂದು ಹೇಳಿದ ಗೋಹಿಲ್, "ರಾಜಿನಾಮೆ ನೀಡಿದ 7 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಆತ್ಮಸಾಕ್ಷಿ ಜಾಗೃತವಾಗಿದೆ. ನಾನು ಅವರಲ್ಲಿ ಜನರ ಕುತಂತ್ರಕ್ಕೆ ಮಣಿಯಬೇಡಿ. ನಿಷ್ಠೆಗೆ ಅಂಟಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಆಗಸ್ಟ್ 8ರಂದು ಚುನಾವಣೆ ನಿಗದಿಯಾಗಿದ್ದು, ಇತ್ತೀಚಿಗೆ ಕೆಲವು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಶಾಸಕರನ್ನು ಬೆಂಗಳೂರಿಗೆ ಕರೆತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com