ಬೆಳಗಾವಿ: ಮಾನ ಮರ್ಯಾದೆ ಇದ್ದರೆ ಜೈಲಿಗೆ ಹೋಗಿ ಬಂದವರು ಮತ್ತು ಬ್ಲೂ ಫಿಲಂ ನೋಡಿದವರು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಅಥಣಿಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಅಲ್ಲದೆ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದ್ದರು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ 2019 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ನಾನು ನೀಡಿದ ಐದು ಬಜೆಟ್‌ನಲ್ಲಿ ಎಲ್ಲಾ ವರ್ಗದವರಿಗೂ ಯೋಜನೆಗಳನ್ನು ರೂಪಿಸಿದ್ದೇನೆ. ನಮ್ಮ ಸರ್ಕಾರ ಬಡವರ, ದೀನದಲಿತರ ಮತ್ತು ಶೋಷಿತರ ಪರವಾಗಿ ಕಾರ್ಯನಿರ್ವಹಿಸಿದೆ. ಜನತೆಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲಾ ವರ್ಗದವರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ಮುಸ್ಲಿಮರಿಗೆ, ದಲಿತರಿಗೆ, ಕ್ರಿಶ್ಚಿಯನ್ನರಿಗೆ ಅನ್ಯಾಯ ಮಾಡುತ್ತಾರೆ ಎಂದು ಆರೋಪಿಸಿದರು.
2018ರ ವಿಜಯಯಾತ್ರೆ ಬೆಳಗಾವಿಯಿಂದಲೇ ಆರಂಭವಾಗಬೇಕು. ಅದಕ್ಕಾಗಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮನೆ ಮನೆಗೆ ತೆರಳಿ ಸರಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.