ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ: ಕುಮಾರಸ್ವಾಮಿಗೆ ಇರಿಸುಮುರಿಸು ತಂದ ಭವಾನಿ ರೇವಣ್ಣ ಹೇಳಿಕೆ!

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಜ್ವಲ್ ಸ್ಪರ್ಧಿಸಲಿದ್ದಾರೆ ಎಂದು ಭವಾನಿ ರೇವಣ್ಣ ನೀಡಿರುವ ಹೇಳಿಕೆ ಎಚ್. ಡಿ ಕುಮಾರ ಸ್ವಾಮಿ...
ಭವಾನಿ ರೇವಣ್ಣ ಮತ್ತು ಕುಮಾರ ಸ್ವಾಮಿ
ಭವಾನಿ ರೇವಣ್ಣ ಮತ್ತು ಕುಮಾರ ಸ್ವಾಮಿ
ಹಾಸನ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಜ್ವಲ್ ಸ್ಪರ್ಧಿಸಲಿದ್ದಾರೆ ಎಂದು ಭವಾನಿ ರೇವಣ್ಣ ನೀಡಿರುವ ಹೇಳಿಕೆ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರ ಸ್ವಾಮಿ ಗೆ ಅಪಥ್ಯವಾಗಿದೆ ಎಂದು ಹೇಳಲಾಗಿದೆ.
2018ರ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಕರ್ನಾಟಕ ವಿಕಾಸ ಯಾತ್ರೆಗೆ ಚಾಲನೆ ನೀಡಿ, ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಭವಾನಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 
''ಚುನಾವಣೆ ಎಂದ ಮೇಲೆ ಸ್ಪರ್ಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಇದಕ್ಕೆ ಕುಟುಂಬದ ಸದಸ್ಯರೂ ಹೊರತಾಗಿಲ್ಲ. ಇದನ್ನು ನಿರ್ಧರಿಸಲೆಂದೇ ಕೋರ್‌ ಕಮಿಟಿ ಸಭೆ ನಡೆಸಲಾಗುವುದು. ಅಭ್ಯರ್ಥಿಗಳನ್ನು ನಿರ್ಧರಿಸುವ ವಿಚಾರವೂ ಅಲ್ಲೇ ನಿರ್ಣಯಿಸಲಾಗುತ್ತದೆ'' ಎಂದು ಹೇಳಿದರು. ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕುಮಾರ ಸ್ವಾಮಿ, ಒಂದು ವೇಳೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದರೇ ಅವರನ್ನೇ  ಹೋಗಿ ಕೇಳಿ ಎಂದು ಹೊರಟು ಹೋದರು.
ತಮ್ಮ ಕುಟುಂಬದಿಂದ ಕೇವಲ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರ ಸ್ವಾಮಿ ಹೇಳಿಕೆ ನೀಡಿದ್ದರು,. ಆದರೆ ನಿನ್ನೆ ಭವಾನಿ ರೇವಣ್ಣ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹಾಸನ ಜಿಲ್ಲೆಯ ಬೇಲೂರು ಮತ್ತು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಪುತ್ರ ಪ್ರಜ್ವಲ್‌ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಭವಾನಿ ರೇವಣ್ಣ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದರು. ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡು ಒಪ್ಪಿಗೆ ನೀಡಿದ್ದು, ಕ್ಷೇತ್ರ ಯಾವುದು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಭವಾನಿ ತಿಳಿಸಿದ್ದರು. 
ಚುನಾವಣೆಗಾಗಿ ದೇವೇಗೌಡರ ಕುಟುಂಬದಿಂದ ವಿಶೇಷ ಪೂಜೆ
ಹಾಸನ ಹೊಳೆನರಸೀಪುರ ತಾಲೂಕು ಹರದನಹಳ್ಳಿ  ಮಾಜಿ  ಪ್ರಧಾನಿ ದೇವೇಗೌಡರ ಕುಟುಂಬದವರು ಮನೆದೇವರು ಈಶ್ವರನಿಗೆ ಪೂಜೆ ಸಲ್ಲಿಸಿದರು.
11 ಮಂದಿ ಅರ್ಚಕರ ತಂಡ  ಶಿರಸಿಯ ರಾಮಚಂದ್ರ ಭಟ್ ನೇತೃತ್ವದಲ್ಲಿ ದೇಶವೇಶ್ವರ ದೇವಾಲಯದಲ್ಲಿ ಶತರುದ್ರ ಹೋಮ ನೆರವೇರಿಸಿದರು. ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಪತ್ನಿ ಚನ್ನಮ್ಮ,  ಕುಮಾರ ಸ್ವಾಮಿ, ಎಚ್.ಡಿ ರೇವಣ್ಣ, ಅವರ ಪತ್ನಿ ಭವಾನಿ ಹಾಗೂ ಮತ್ತೊಬ್ಬ ಪುತ್ರ ಡಾ. ಸೂರಜ್ ರೇವಣ್ಣ ಹೋಮದಲ್ಲಿ ಪಾಲ್ಗೊಂಡಿದ್ದರು. ಪ್ರಜ್ವಲ್ ರೇವಣ್ಣ ಪೂಜೆಗೆ ಹಾಜರಾಗಿರಲಿಲ್ಲ,
ತಮ್ಮ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ ಡಿಕೆ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದ ಅವರು ಮೈತ್ರಿ ಸರ್ಕಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಶೀಘ್ರದಲ್ಲೇ ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿಸಿದರು.
ತಮ್ಮ ಕೊನೆಯ ಉಸಿರಿರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿರುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮಾವಿನ ಕೆರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತನ್ನ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುವಂತೆ ಮಾಡುವುದೇ  ತಮ್ಮ ಗುರಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com