ಮಾಜಿ ಡಿಸಿಎಂ ಆರ್. ಅಶೋಕ್ ರಿಂದ 10 ಸಾವಿರ ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ: ಉಗ್ರಪ್ಪ

ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್‌ 10 ಸಾವಿರ ಕೋಟಿ ರು. ಮೌಲ್ಯದ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್...
ಆರ್. ಅಶೋಕ್
ಆರ್. ಅಶೋಕ್
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್‌ 10 ಸಾವಿರ ಕೋಟಿ ರು. ಮೌಲ್ಯದ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದಾಗ 88 ಅನರ್ಹ ಫಲಾನುಭವಿಗಳಿಗೆ 245 ಎಕರೆ ಮಂಜೂರು ಮಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಬಗರ್‌ಹುಕುಂ ಕಡತ ಪರಿಶೀಲಿಸಿ ಕಾನೂನುಬಾಹಿರವಾಗಿ ಮಂಜೂರು ಮಾಡಿರುವ ಜಮೀನುಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಈ ಹಗರಣದ ವಿರುದ್ಧ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ಅನಧಿಕೃತವಾಗಿ ಹಂಚಿಕೆ ಮಾಡಿರುವ ಜಮೀನನ್ನು ಸರ್ಕಾರ ವಾಪಸ್  ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೆ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅಶೋಕ್ ಅವರು ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದರು. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮತ್ತು ಅವರ ಕುಟುಂಬದವರಿಗೆ 25.32 ಎಕರೆ, ಭೂನ್ಯಾಯ ಮಂಡಳಿ ಮಾಜಿ ಸದಸ್ಯರಿಗೆ 6.38 ಎಕರೆ, ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಅವರ ಕುಟುಂಬಸ್ಥರಿಗೆ 5 ಎಕರೆ, ಆರ್ಥಿಕವಾಗಿ ಪ್ರಬಲರಾದವರು ಮತ್ತು ಅರ್ಜಿ ಸಲ್ಲಿಸಿದ ಗ್ರಾಮದಲ್ಲಿ ವಾಸ ಇಲ್ಲದವರಿಗೂ 162.17 ಎಕರೆ ಜಮೀನು ಮಂಜೂರು ಮಾಡಿದ್ದಾರೆ ಎಂದು ವಿವರಿಸಿದರು.
ಅಶೋಕ್‌ ಅವರ ಅಧಿಕಾರಾವಧಿಯಲ್ಲಿ ದಕ್ಷಿಣ ತಾಲ್ಲೂಕಿನಲ್ಲಿ ಒಟ್ಟಾರೆ 2,500 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಪ್ರತಿ ಚದರ ಅಡಿಗೆ ರು.2,500ರಿಂದ ರು 3,000 ಇದೆ. ಒಟ್ಟಾರೆ ಮೌಲ್ಯ ರು. 10,000 ಕೋಟಿ ಆಗುತ್ತದೆ ಎಂದು ಮಾಹಿತಿ ನೀಡಿದರು.
ಆರೋಪ ನಿರಾಕರಿಸಿದ ಅಶೋಕ್:  ಉಗ್ರಪ್ಪ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಅಶೋಕ ಎರಡು ವರ್ಷಗಳ ಹಿಂದೆಯೇ ಲೋಕಾಯುಕ್ತ ಮತ್ತು ಹೈಕೋರ್ಟ್ ನಲ್ಲಿ ಕೇಸ್ ಖುಲಾಸೆಯಾಗಿದೆ. ಮತ್ತೆ ಅವರು ಕೇಸ್ ಮುಂದುವರಿಸಬೇಕೆಂದರೇ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅಪೀಲು ಸಲ್ಲಿಸಲಿ ಎಂದು ಹೇಳಿದ್ದಾರೆ.
ನಾನು ಬಗರ್ ಹುಕುಂ ಸಮಿತಿ ಅಧ್ಯಕ್ಷನಾಗಿದ್ದು 2000-2004ರಲ್ಲಿ , ಆ ವೇಳೆ ಅಧಿಕಾರದಲ್ಲಿದ್ದಿದ್ದು ಕಾಂಗ್ರೆಸ್ ಸರ್ಕಾರ, ಸಮಿತಿಯಲ್ಲಿ ಕಾಂಗ್ರೆಸ್ ನಾಲ್ವರು ನಾಮನಿರ್ದೇಶಿತಗೊಂಡ ಸದಸ್ಯರು ಕೂಡ ಇದ್ದರು. ನಾನೋಬ್ಬನೇ ಹೇಗೆ ಭೂಮಿ ಮಂಜೂರು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 
ಇನ್ನೂ ಬಿಬಿಬಎಂ ಅಧಿಕಾರಿಗಳು ಕಾನೂನು ಬಾಹಿರವಾಗಿ 850 ಕೋಟಿ ರು. ಮೌಲ್ಯದ ಸ್ವೀಪಿಂಗ್ ಮೆಷಿನ್ ಖರೀದಿ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದರಲ್ಲಿ ಬೆಂಗಳೂರು ನಗರಾಭಿವದ್ಧಿ ಸಚಿವ ಕೆ.ಜೆ ಜಾರ್ಜ್ ಕೂಡ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ದೂರಿದ್ದಾರೆ. ಸ್ವೀಪಿಂಗ್ ಮೆಷಿನ್ ಖರೀದಿಸಲು ಬಿಬಿಎಂಪಿ ಅಧಿಕಾರಿಗಳು ನೂರಾರು ಕೋಟಿ ರು. ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com