

ಬೆಂಗಳೂರು: ನೀತಿ ಸಂಹಿತೆ ಹೆಸರಿನಲ್ಲಿ ಚುನಾವಣಾಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿನ ಮುಖಂಡರು ಚುನಾವಣಾ ಆಯುಕ್ತರನ್ನು ಭೇಟಿಮಾಡಿ 'ನಮ್ಮ ಕಾರ್ಯಕರ್ತರು ಮನೆಗಳ ಮೇಲೆ ಹಾಕಿಕೊಂಡಿದ್ದ ಓಂ ಗುರುತು ಇರುವ ಬಾವುಟಗಳನ್ನು ತೆರವುಗೊಳಿಸುವ ಮೂಲಕ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ' ಎಂದು ದೂರಿದರು.
"ಹಾಗೆಯೇ, ತಮ್ಮ ತಮ್ಮ ಮನೆಗಳ ಗೋಡೆ ಮೇಲೆ ಬರೆದಿರುವಂತಹ 'ಕಮಲ' ದ ಚಿಹ್ನೆ ಹಾಗೂ ಬರಹಗಳನ್ನು ಅಳಿಸುವಂತೆಯೂ ತಾಕೀತು ಮಾಡುತ್ತಿದ್ದಾರೆ. ಇವೆಲ್ಲ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.
ಸಚಿವ ಅನಂತ್ ಕುಮಾರ್, ಸಂಸದ ಪಿ.ಸಿ. ಮೋಹನ್, ಶಾಸಕ ಆರ್.ಆಶೋಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.