ವಿಧಾನಸಭೆ ಚುನಾವಣೆ: ಟಿಕೆಟ್ ಸಿಗದ ಅಭ್ಯರ್ಥಿಗಳ ಬೆಂಬಲಿಗರಿಂದ ರಾಜ್ಯದ ಕೆಲವೆಡೆ ಪ್ರತಿಭಟನೆ
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ವಂಚಿತರಾಗಿರುವ ಹಾಲಿ ಶಾಸಕರು ಮತ್ತು ಪ್ರಬಲ ಸ್ಪರ್ಧಿಗಳ ಕ್ಷೇತ್ರಗಳಲ್ಲಿ ಅಸಮಾಧಾನ ಹೊಗೆ ಭುಗಿಲೆದ್ದಿದೆ.
ಗಾಯತ್ರಿ ಶಾಂತೇಗೌಡರ ಬೆಂಬಲಿಗರು ಚಿಕ್ಕಮಗಳೂರಿನ ಆಜಾದಿ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಟೈರ್ ಗಳಿಗೆ ಬೆಂಕಿ ಹಚ್ಚಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿಯಲ್ಲಿ, ಶಾಸಕ ಡಿಬಿ ಇನಾಮ್ ದಾರ್ ಅವರ ಬೆಂಬಲಿಗರು ರಸ್ತೆ ತಡೆ ನಡೆಸಿ ಟೈರ್ ಗಳಿಗೆ ಬೆಂಕಿ ಹಚ್ಚಿದರು. ನಿನ್ನೆ ಕಾಂಗ್ರೆಸ್ ಸ್ಪರ್ಧಾಳುಗಳ ಪಟ್ಟಿ ಘೋಷಣೆಯಾಗುವುದಕ್ಕೆ ಮೊದಲೇ ಬೆಂಬಲಿಗ ಅಭ್ಯರ್ಥಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವು ಸಿಕ್ಕ ಕೂಡಲೇ ಬೆಂಬಲಿಗರು ಪ್ರತಿಭಟನೆಗಿಳಿದಿದ್ದರು.
ತರಿಕೆರೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕ ಜಿಎಚ್ ಶ್ರೀನಿವಾಸ್ ಬೆಂಬಲಿಗರು ಧರಣಿ ನಡೆಸಿ ತಮ್ಮ ನಾಯಕನಿಗೆ ಟಿಕೆಟ್ ಕೊಡಿಸದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಂಬಲಿಗರೊಂದಿಗೆ ಶ್ರೀನಿವಾಸ್ ಪತ್ನಿ ವಾಣಿ ಕೂಡ ಕಣ್ಣೀರು ಹಾಕುತ್ತಿದ್ದರು. ಶ್ರೀನಿವಾಸ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಕೋಲಾರದಲ್ಲಿ ಟಿಕೆಟ್ ನೀಡದಿರುವುದಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ವಿ.ಆರ್.ಸುದರ್ಶನ್ ಬೆಂಬಲಿಗರು ಕೋಲಾರದಲ್ಲಿ ಪ್ರತಿಭಟನೆ ನಡೆಸಿ ಜಮೀರ್ ಪಾಷಾಗೆ ಟಿಕೆಟ್ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಪದ್ಮನಾಭ ನಗರದಲ್ಲಿ ಪಕ್ಷದ ಕಾರ್ಯಕರ್ತರ ಬಲವಾದ ಒತ್ತಾಯದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಗುರಪ್ಪ ನಾಯ್ಡು ಅವರನ್ನು ಅಭ್ಯರ್ಥಿಯಾಗಿ ಆರಿಸಿದೆ. ಪಕ್ಷದ ಆಂತರಿಕ ವಲಯದ ಪ್ರಕಾರ, ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲು ಈ ಹಿಂದೆ ನಿರ್ಧರಿಸಲಾಗಿತ್ತು.
ಕಾರ್ಕಳದಲ್ಲಿ ಭಿನ್ನಮತ: ಕಾರ್ಕಳದಲ್ಲಿ ಕೂಡ ಟಿಕೆಟ್ ಆಕಾಂಕ್ಷಿ ಮುನಿಯಾಳ್ ಉದಯ್ ಕುಮಾರ್ ಶೆಟ್ಟಿಯವರ ಬೆಂಬಲಿಗರ ಪ್ರತಿಭಟನೆ ತೀವ್ರವಾಗಿತ್ತು. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಉದಯ್ ಕುಮಾರ್ ಮುಂಬರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಅವರು ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ನ ಗೋಪಾಲ್ ಭಂಡಾರಿ ಮತ್ತು ಬಿಜೆಪಿ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ.
ಉಡುಪಿ ಜಿಲ್ಲೆಯ ಕಾರ್ಕಳದಿಂದ ಈ ಬಾರಿ ಕಾಂಗ್ರೆಸ್ ನಿಂದ ಮೂವರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದರು, ಅವರಲ್ಲಿ ಮಾಜಿ ಶಾಸಕ ಗೋಪಾಲ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ