
ಕಾರವಾರ :ಮೈಗಿನಿ ರಾಜ್ಯದ ಕೊನೆಯ ಹಳ್ಳಿ. ಗೋವಾದಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ 40 ಪುರುಷರು ಹಾಗೂ 49 ಮಹಿಳಾ ಮತದಾರರಿದ್ದಾರೆ. ಅರಣ್ಯದಲ್ಲಿ ಈ ಹಳ್ಳಿಯಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ನಿರ್ಲಕ್ಷಿಸಲ್ಪಟ್ಟಿದೆ.
ಪ್ರತಿಬಾರಿಯೂ ಮತದಾನದ ಸಂದರ್ಭದಲ್ಲಿ ಮತದಾರರು ಮತ ಚಲಾಯಿಸಲು 3 ಕಿಲೋ ಮೀಟರ್ ದೂರ ಕ್ರಮಿಸಬೇಕಿದೆ. ಹಾಂಕೊನ್, ಹೊಟೆಗಳ್ಳಿ, ಹಾಂಕೊನ್ ಜಾಗ್, ಗೊಪಾಸಶಿಟ್ಟ ಮತ್ತು ಮೈಗಿನಿ ಹಳ್ಳಿಯನ್ನೊಳಗೊಂಡ ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಮತಗಟ್ಟೆಗಳನ್ನು ಚುನಾವಣಾ ಆಯೋಗ ಸ್ಥಾಪಿಸುತ್ತದೆ.
ಕೊಂಕಣಿ ಮಾತನಾಡುವ ಕುಣಬಿ ಸಮುದಾಯದ 30 ಮನೆಗಳು ಇಲ್ಲಿವೆ. ಕೆಲ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಟಿವಿಗಳೂ ಇವೆ. ಆದರೆ, ನೀರಿನ ಸಮಸ್ಯೆ ತೀವ್ರವಾಗಿದೆ. ಕೃಷಿಗಾಗಿ ಮಳೆ ನೀರನ್ನೆ ಹೆಚ್ಚಾಗಿ ಅವಲಂಬಿಸಬೇಕಾಗಿದ್ದು, ಭತ್ತ ಬೆಳೆಯಲಾಗುತ್ತದೆ.
ಯುವಕರು ಗೋವಾಕ್ಕೆ ಕೆಲಸಕ್ಕೆ ಹೋಗುತ್ತಾರೆ . ಆದರೆ, ಯಾವೊಬ್ಬ ಶಾಸಕರಾಗಲೀ, ಆಕಾಂಕ್ಷಿಗಳಾಲೀ ಇತ್ತ ತಿರುಗಿಯೂ ನೋಡಲ್ಲ. ಆದರೆ , ಅಲ್ಲಿನ ಜನ ಮಾತ್ರ ತಮ್ಮ ಶಾಸಕರು ಯಾರು ಎಂಬುದನ್ನು ತಿಳಿದಿದ್ದಾರೆ. ನಮ್ಮ ಶಾಸಕ ಸತೀಶ್ ಸೈಲ್ ಎನ್ನುತ್ತಾರೆ 48 ವರ್ಷದ ರಾಧಾ ಕೃಷ್ಣ ಗೊವಂಕರ್.
ಕರ್ನಾಟಕ- ಗೋವಾ ಗಡಿಯಲ್ಲಿನ ಕೊನೆಯ ಗ್ರಾಮವಾದ ಮೈಗಿನಿಯ ಜನರು ಮತ ಚಲಾಯಿಸುತ್ತಾರೆ. ತಮ್ಮ ಮಗ ಮನೆಯವರನೆಲ್ಲಾ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಮತ ಚಲಾಯಿಸಿಕೊಂಡು ಬರುತ್ತಾನೆ ಎಂದು ಗೋವಿಂದ್ ಗೊವಂಕರ್ ಹೇಳುತ್ತಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಶಾಲೆಗಳಲ್ಲಿ ಕನ್ನಡ ಬೋಧಿಸಲಾಗುತ್ತದೆ. ಆದರೆ. ಮಕ್ಕಳು ಕೊಂಕಣಿ ಮಾತನಾಡುತ್ತಾರೆ. ದೂರದ ಕಾರಣ ಮತವನ್ನು ವ್ಯರ್ಥ್ಯ ಮಾಡುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಮಧ್ಯೆ ಸ್ಥಳೀಯ ಪೊಲೀಸರು ತಾತ್ಕಾಲಿಕ ಚೆಕ್ ಪೋಸ್ಟ್ ತೆರೆದಿದ್ದಾರೆ. ಗ್ರಾಮಸ್ಥರು ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Advertisement