ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವೆ: ಚರ್ಚೆಗೆ ಕಾರಣವಾಯ್ತು ಸಿದ್ದರಾಮಯ್ಯ ಹೇಳಿಕೆ

ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಇದೀಗ ಅಸಮಾಧಾನಕ್ಕೆ ಕಾರಣವಾಗಿದ್ದು, ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಇದೀಗ ಅಸಮಾಧಾನಕ್ಕೆ ಕಾರಣವಾಗಿದ್ದು, ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ಕೆಲವರು ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾದು ಕುಳಿತಿದ್ದಾರೆ. ಕೆಲ ಮಾಧ್ಯಮಗಳಂತೂ ಸೆ.3 ರಂದು ಹೊಸ ಮುಖ್ಯಮಂತ್ರಿ ಬರುತ್ತಾರೆಂದು ವರದಿ ಮಾಡುತ್ತಿವೆ. ಆದರೆ, ಈ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ. ಸಮ್ಮಿಶ್ರ ಸರ್ಕಾರವನ್ನು ಹೇಗೆ ನಡೆಸಬೇಕು ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ. 
ನಾನು ಶಾಸಕರ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದೇನೆ, ಎಂತಹ ಬಾಂಧವ್ಯ ಹೊಂದಿದ್ದೇನೆ. ಎಷ್ಟು ಸೂಕ್ಷ್ಮತೆಯಿಂದ ಕೆಲಸ ಮಾಡುತ್ತಿದ್ದೇನೆಂಬುದು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುವವರು ಅರ್ಥ ಮಾಡಿಕೊಳ್ಳಬೇಕು. 
ಮುಖಅಯಮಂತ್ರಿ ಖುರ್ಚಿ ಭದ್ರತೆಗೆ ನಾನು ಸಮಯ ವ್ಯರ್ಥ ಮಾಡುವುದಿಲ್ಲ. ಸರ್ಕಾರ ಶಕ್ತಿ ಏನೆಂಬುದು ನನಗೆ ತಿಳಿದಿದೆ. ಮುಂದೆಯೂ ಈ ಸರ್ಕಾರ ಭದ್ರವಾಗಿರುತ್ತದೆ. ಈ ಹಿಂದೆ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೆ. ಇಂದು ಕೂಡ ದೇವಲ ದಯೆಯಿಂದ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಎಷ್ಟು ದಿನ ಈ ಹುದ್ದೆಯಲ್ಲಿರುತ್ತೇನೆಂಬುದು ಆ ದೇವರೇ ಬರೆದಿದ್ದಾನೆ. ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಮುಖ್ಯವಲ್ಲ. ಇರುವಷ್ಟು ದಿನ ಹೇಗೆ ನಾಡಿನ ಜನರ ಸೇವೆ ಮಾಡುತ್ತೇನೆಂಬುದು ಮುಖ್ಯ ಎಂದು ತಿಳಿಸಿದ್ದಾರೆ. 
ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಸುರೇಶ್ ಅಂಗಡಿಯವರು, ದೇಶದ ಪ್ರಧಾನಮಂತ್ರಿಯಾಗಿದ್ದಾಗ ದೇವೇಗೌಡರಿಗೆ ಕಾಂಗ್ರೆಸ್ ಮೋಸ ಮಾಡಿತ್ತು. ಇದೀಗ ಅದೇ ರೀತಿ ಕುಮಾರಸ್ವಾಮಿಯವರಿಗೂ ಮಾಡಲಿದೆ. 15 ದಿನಗಳಲ್ಲಿ ಮೈತ್ರಿ ಸರ್ಕಾರ ಮುರಿದು ಬೀಳಲಿದೆ. ಕುಮಾರಸ್ವಾಮಿಯವರಿಗೆ ನೀಡಿರುವ ಬೆಂಬಲವನ್ನು ಶೀಘ್ರದಲ್ಲಿಯೇ ಕಾಂಗ್ರೆಸ್ ವಾಪಸ್ ಪಡೆಯಲಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com