ಕೈ ಪಾಳಯದಲ್ಲಿ ಬಂಡಾಯ: ಸಂಪರ್ಕಕ್ಕೇ ಸಿಗದ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢ!

ಸಂಪುಟ ಪುನಾರಚನೆ ನಂತರ ಅತೃಪ್ತಿ ಹೊಂದಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿಯವರನ್ನು ಸಮಾಧಾನ ಪಡಿಸಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ಮತ್ತೊಬ್ಬ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಹಾಗೂ...
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Updated on
ಬೆಂಗಳೂರು: ಸಂಪುಟ ಪುನಾರಚನೆ ನಂತರ ಅತೃಪ್ತಿ ಹೊಂದಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿಯವರನ್ನು ಸಮಾಧಾನ ಪಡಿಸಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ಮತ್ತೊಬ್ಬ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಹಾಗೂ ಅವರ ತಂಡ ಮಾತ್ರ ತಮ್ಮ ಮುಂದಿನ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. 
ಕೆಲ ನಾಯಕರು ಉದ್ದೇಶಪೂರ್ವಕವಾಗಿಯೇ ಹೈಕಮಾಂಡ್'ಗೆ ತಪ್ಪು ಮಾಹಿತಿ ನೀಡಿ ತಮಗೆ ಸಚಿವ ಸ್ಥಾನ ತಪ್ಪಿಸಿದ್ದಾರೆಂದು ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಯವರೊಂದಿಗೆ ನಿನ್ನೆಯಷ್ಟೇ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯ ಅವರು, ಕೆಲ ಅನಿವಾರ್ಯ ಕಾರಣಗಳಿಂದ ಹಿರಿಯರಾಗಿದ್ದರೂ ನಿಮಗೆ ಸಚಿವ ಸ್ಥಾನ ತಪ್ಪಿದೆ. ಆಧರೆ, ಒಳ್ಳೆಯ ಕಾಲ ಬರುತ್ತದೆ. ಸ್ವಲ್ಪ ತಾಳ್ಮೆ ವಹಿಸಿ, ಈಗ ನಾನು ಅಧಿಕಾರ ಇಲ್ಲದೇ ಕಾಯುತ್ತಿಲ್ಲವೇ? ಅದೇ ರೀತಿ ನೀವು ತಾಳ್ಮೆ ವಹಿಸಿ, ಖಂಡಿತವಾಗಿಯೂ ಉತ್ತಮ ಅವಕಾಶ ಬರುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಮಲಿಂಗಾರೆಡ್ಡಿಯವರು ತಾಳ್ಮೆ ವಹಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಇದಾದ ಬಳಿಕ ಮತ್ತೊಬ್ಬ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿಯವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಸಂಪರ್ಕಿಸಲು ಯತ್ನ ನಡೆಸಿದ್ದರೂ, ಜಾರಕಿಹೊಳಿಯವರು ಸಂಪರ್ಕಕ್ಕೆ ಸಿಕ್ಕಿಲ್ಲ. 
ಈ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತ ಗೋಕಾಕ್ ಅವರು, ನಮ್ಮ ಸಂಪರ್ಕಕ್ಕೂ ಜಾರಕಿಹೊಳಿ ಸಿಕ್ಕಿಲ್ಲ. ಬೆಳಗಾವಿ ಅಥವಾ ಗೋಕಾಕ್ ನಲ್ಲಿರಬಹುದು. ಈ ಬಗ್ಗೆ ನಮಗೂ ಖಚಿತ ಮಾಹಿತಿಗಳಿಲ್ಲ. ರಾಜ್ಯ ಕಾಂಗ್ರೆಸ್ ನಾಯಕತ್ವದ ಮೇಲೆ ಸಾಕಷ್ಟು ಬೇಸರಗೊಂಡಿದ್ದಾರೆ. ಹೀಗಾಗಿಯೇ ಮೈತ್ರ ಸರ್ಕಾರದ ವಿರುದ್ಧ ನಿಂತಿದ್ದಾರೆ. 8 ಅತೃಪ್ತ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಜಾರಕಿಹೊಳಿಯವರು ಸಭೆ ನಡೆಸಿ ಮಾತುಕತೆ ನಡೆಸಿದ್ದಾಗ ನಾನು ಕೂಡ ಇದ್ದೆ. ಮತ್ತಷ್ಟು ಶಾಸಕರು ತಮ್ಮೊಂದಿಗೆ ಕೈಜೋಡಿಸುವ ಬಗ್ಗೆ ಅವರು ಸಾಕಷ್ಟು ವಿಶ್ವಾರ ಹೊಂದಿದ್ದಾರೆಂದು ಹೇಳಿದ್ದಾರೆ. 
ಜಾರಕಿಹೊಳಿಯವರು ಕೇವಲ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಕೇವಲ ಬ್ಲಾಕ್ ಮೇಲ್ ಮಾಡುತ್ತಿರುವುದೇ ಆಗಿದ್ದರೆ, ಕಾಂಗ್ರೆಸ್ ಹೈ ಕಮಾಂಡ್ ಏಕೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು? ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ.ವೇಣುಗೋಪಾಲ್ ಅವರಿಗೆ ರಾಜ್ಯ ಹಿರಿಯ ನಾಯಕರೊಂದಿಗೆ ಸಭೆ ನಡೆಸುವಂತೆ ಏಕೆ ಸೂಚಿಸಬೇಕು ಎಂದು ಮತ್ತೊಬ್ಬ ಆಪ್ತರು ಪ್ರಶ್ನಿಸಿದ್ದಾರೆ. 
ಮೂಲಗಳ ಪ್ರಕಾರ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರು ಕಳೆದ ರಾತ್ರಿ ರಮೇಶ್ ಜಾರಕಿಹೊಳಿಯವರೊಂದಿಗೆ ದೂರವಾಣಿ ಕರೆ ಮುಖಾಂತರ ಮಾತುಕತೆ ನಡೆಸಿದ್ದು, ಆದರೆ, ಇದರಿಂದ ಅವರ ಮನಸ್ಸು ಕರಗಿಲ್ಲ ಎಂದು ಹೇಳಲಾಗುತ್ತಿದೆ. 
ಈ ನಡುವೆ ಮುಂದಿನ ಲೋಕಸಭಾ ಚುನಾವಣೆ ವೇಳೆ ಬೆಳಗಾವಿ ಟಿಕೆಟ್ ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com