ಕೆಂಪಯ್ಯ 'ಸೂಪರ್ ಸಿಎಂ' ಇದ್ದಂತೆ: ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಸದನದಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಗಳವಾರ ಹರಿಹಾಯ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿವೆ...
ಸದನದಲ್ಲಿ ಮಾತನಾಡುತ್ತಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ
ಸದನದಲ್ಲಿ ಮಾತನಾಡುತ್ತಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಸದನದಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಗಳವಾರ ಹರಿಹಾಯ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿವೆ. 
ವಿಧಾನಸಬೆಯಲ್ಲಿ ನಿನ್ನೆ ಮಾತನಾಡಿರುವ ವಿರೋಧ ಪಕ್ಷಗಳ ನಾಯಕ ಜಗದೀಶ್ ಶೆಟ್ಟರ್ ಅವರು, ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಗೃಹ ಇಲಾಖೆ ಇದ್ದರೂ ಇಲ್ಲದಂತಾಗಿದ್ದು, ಇಲಾಖೆಯ ಪ್ರತೀಯೊಂದು ಕಾರ್ಯವನ್ನು ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರೇ ನೋಡಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 
ಕೆಂಪಯ್ಯ ಅವರು ಸೂಪರ್ ಸಿಎಂ ರಂತಾಗಿದ್ದು, ಗೃಹ ಇಲಾಖೆಯ ಪ್ರತೀಯೊಂದು ಕೆಲಸವನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಗಾವಣೆ ವ್ಯವಹಾರವಾಗಿ ಹೋಗಿದೆ. ಇಲಾಖೆಯಲ್ಲಿ ಸೃಷ್ಟಿಯಾಗಿರುವ ಎಲ್ಲಾ ರೋಗಗಳಿಗೂ ಇದೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 
ಕಳೆದ ನಾಲ್ಕೂವರೆ ವರ್ಷಗಳಿಂದಲೂ ಕೆಂಪಯ್ಯ ಅವರು ಗೃಹ ಸಚಿವಾಲಯದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಮೂರು ಬಾರಿ ಗೃಹ ಸಚಿವರು ಬದಲಾಗಿದ್ದಾರೆ. ಕೆ.ಜೆ.ಜಾರ್ಜ್, ಜಿ. ಪರಮೇಶ್ವರ್ ಹಾಗೂ ರಾಮಲಿಂಗಾ ರೆಡ್ಡಿಯವರು ಗೃಹ ಸಚಿವರಾಗಿದ್ದರು. ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದು ಯಾರೊಬ್ಬರಿಗೂ ತಿಳಿಯಲಿಲ್ಲ. ರಾಜ್ಯದಲ್ಲಿಂದು ಭೀತಿಕರ ವಾತಾವರಣ ನಿರ್ಮಾಣಗೊಂಡಿದೆ. ಇತ್ತೀಚೆಗಷ್ಟೇ ನಗರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋಜಿಯವರೂ ಕೂಡ ಕರ್ನಾಟಕದಲ್ಲಿ ಕೊಲೆ ಮಾಡುವುದು ಸುಲಭವಾಗಿ ಬಿಟ್ಟಿದೆ (ಈಸ್ ಆಫ್ ಡೂಯಿಂಗ್ ಮರ್ಡರ್) ಎಂದು ಹೇಳಿದ್ದರು. ಒಂದೊಮ್ಮೆ ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಇದೀಗ ಗಾರ್ಬೇಜ್, ಅಪರಾಧ, ಅತ್ಯಾಚಾರ, ಕೊಲೆಗಳ ನಗರವಾಗಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. 
ಶೆಟ್ಟರ್ ಅವರ ಈ ಹೇಳಿಕೆಗೆ ಸಚಿವ ಆರ್.ವಿ.ದೇಶಪಾಂಡೆಯವರು ತೀವ್ರವಾಗಿ ಕಿಡಿಕಾರಿದರು. ಇಂತಹ ಹೇಳಿಕೆಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಹೂಡಿಕೆದಾರರನ್ನು ಆಕರ್ಷಿಸುವುದರಲ್ಲಿ ಬೆಂಗಳೂರು ಉತ್ತಮ ಸ್ಥಾನದಲ್ಲಿದೆ. ವಿರೋಧ ಪಕ್ಷಗಳ ನಾಯಕರು ಈ ರೀತಿಯ ಹೇಳಿಕೆಯನ್ನು ನೀಡುವುದರಿಂದ ಇದರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು. 
ಬಳಿಕ ಬಿಜೆಪಿಯವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು, ಇಲಾಖೆ ಸಂಪೂರ್ಣವಾಗಿ ನನ್ನ  ಹಿಡಿತದಲ್ಲಿಯೇ ಇದೆ ಎಂದರು. 
ರೌಡಿ ಶೀಟರ್'ಗಳ ಪರವಾಗಿ ಬಿಜೆಪಿ ಏಕೆ ಹೋರಾಟ ಮಾಡುತ್ತಿದೆ: ಸಿಎಂ
ಬಿಜೆಪಿ ನಾಯಕರೇಕೆ ರೌಡಿ ಶೀಟರ್ ಗಳ ಪರವಾಗಿ ಹೋರಾಟ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. 
ಪಕ್ಷದ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ ನೀಡುತ್ತಿದ್ದು, ಕಾರ್ಯಕರ್ತರ ಹೆಸರನ್ನು ರೌಡಿ ಶೀಟರ್'ಗಳ ಹೆಸರಿನಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲಾ ರೌಡಿಗಳು ಮುಗ್ದರೆಂದು ಬಿಜೆಪಿ ಸದಸ್ಯರು ಹೇಳುತ್ತಿರುವಂತಿದೆ. ರೌಡಿ ಶೀಟರ್'ಗಳ ಪರವಾಗಿ ಬಿಜೆಪಿ ಏಕೆ ಹೋರಾಟ ಮಾಡುತ್ತಿದೆ? ಬಿಜೆಪಿ ಹೇಳುತ್ತಿರುವಂತೆ ರೌಡಿ ಶೀಟರ್ ಗಳ ಪಟ್ಟಿಯಲ್ಲಿ ಮುಗ್ದರ ಹೆಸರುಗಳಿರುವುದೇ ಆದರೆ, ಅಂತಹವರ ಹೆಸರನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com