ರಾಜಕಾರಣಿ ಮಕ್ಕಳ ದರ್ಪ-ದುರಹಂಕಾರ ಇದೇ ಮೊದಲಲ್ಲ, ಹಿಂದೆಯೂ ನಡೆದಿವೆ ಇಂಥ ಘಟನೆಗಳು!

ರಾಜಕೀಯ ನೇತಾರರ ಮಕ್ಕಳು ಸೊಕ್ಕಿನಿಂದ, ದರ್ಪದಿಂದ ಸಾರ್ವಜನಿಕ ಸ್ಥಳಗಳಲ್ಲಿ ವರ್ತಿಸಿ, ಸುದ್ದಿಯಾಗಿರುವುದು ಇದೇ ಮೊದಲಲ್ಲ, ಈ ಮೊದಲು ಅನೇಕ ...
ಸುನೀಲ್ ಬೋಸ್, ರಾಣಾ ಜಾರ್ಜ್, ನಿಖಿಲ್ ಕುಮಾರ್, ಕಾರ್ತಿಕ್
ಸುನೀಲ್ ಬೋಸ್, ರಾಣಾ ಜಾರ್ಜ್, ನಿಖಿಲ್ ಕುಮಾರ್, ಕಾರ್ತಿಕ್
ಬೆಂಗಳೂರು: ರಾಜಕೀಯ ನೇತಾರರ ಮಕ್ಕಳು ಸೊಕ್ಕಿನಿಂದ, ದರ್ಪದಿಂದ ಸಾರ್ವಜನಿಕ ಸ್ಥಳಗಳಲ್ಲಿ ವರ್ತಿಸಿ, ಸುದ್ದಿಯಾಗಿರುವುದು ಇದೇ ಮೊದಲಲ್ಲ, ಈ ಮೊದಲು ಅನೇಕ ರಾಜಕಾರಣಿಗಳ ಮಕ್ಕಳು ಇಂಥಹುದೇ ವಿಷಯಕ್ಕಾಗಿ ಸುದ್ದಿಯಾಗಿದ್ದಾರೆ, ಅಂಥಹ ಪ್ರಕರಣಗಳನ್ನು ವಿರೋಧ ಪಕ್ಷಗಳು ಸರಿಯಾಗಿಯೇ ಬಳಸಿಕೊಂಡಿವೆ.
17ನೇ ನವೆಂಬರ್ 2017 ರಲ್ಲಿ ಕೃಷ್ಣರಾಜನಗರ ಕ್ಷೇತ್ರದ ಶಾಸಕ ಸಾ.ರಾ ಮಹೇಶ್ ಪುತ್ರ ಜಯಂತ್  ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು, ಅದಾದ ನಂತರ ಶಾಸಕ ಮಹೇಶ್ ಕ್ಷಮೆ ಕೋರಿದ್ದರು. 
2016 ರಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಭೂ ವಿಜ್ಞಾನಿಯೊಬ್ಬರಿಗೆ ಮರಳುಗಣಿಗಾರಿಕೆಗ ಅನುಮತಿ ನೀಡಲು ಲಂಚದ ಆಮೀಷ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ  ಮೈಸೂರು ಜಿಲ್ಲ ಸೆಷೆನ್ಸ್ ನ್ಯಾಯಾಲಯ ನ್ಯಾಯಾಧೀಶರು ಸುನೀಲ್ ಬೋಸ್ ಗೆ ಸಮನ್ಸ್ ನೀಡಿದ್ದರು, ಅದಾದ ನಂತರ ಸುನೀಲ್ ಬೋಸ್ ಪೊಲೀಸರೊಂದಿಗೆ ಪಾರ್ಟಿ ಮಾಡಿದ್ದ ಫೋಟೋ ಸಿಕ್ಕಿಬಿದ್ದಿದ್ದವು.
ಇನ್ನೂ 2014 ರಲ್ಲಿ ಕೆ.ಜೆ ಜಾರ್ಜ್ ಗೃಹ ಸಚಿವರಾಗಿದ್ದ ವೇಳೆ ಅವರ ಪುತ್ರ ರಾಣಾ ಜಾರ್ಜ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಸುದ್ದಿ ಮಾಡಿದ್ದ. ಈ ವೇಳೆ  ಬಿಜೆಪಿ ಮತ್ತು ಜೆಡಿಎಸ್ ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿದ್ದರು.
ಸಾರ್ವಜನಿಕ ಜೀವನದಲ್ಲಿ ಕ್ಲೀನ್ ಇಮೇಜ್ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ವಿರುದ್ಧ ನಟಿ ಮೈತ್ರೇಯಿ ಗೌಡ 2014 ರಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸದಾನಂದಗೌಡ ರಾಜೀನೆಮೆಗೆ ಆಗ್ರಹಿಸಿತ್ತು.
2006 ರಲ್ಲಿ ಎಚ್ .ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಪುತ್ರ ಈಗ ಸಿನಿಮಾ ನಾಯಕರಾಗಿರುವ ನಿಖಿಲ್ ಕುಮಾರ ಸ್ವಾಮಿ ವಿರುದ್ಧ ದೂರು ದಾಖಲಾಗಿತ್ತು. ಸ್ನೇಹಿತರೊಂದಿಗೆ ಹೊಟೆಲ್ ಗೆ ತೆರಳಿ ಮುಂಜಾನೆ ವೇಳೆ ಊಟ ನೀಡದಿದ್ದಕ್ಕೆ ಹೋಟೆಲ್ ನ ಗಾಜು ಪುಡಿ ಪುಡಿ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.
ಮಕ್ಕಳು ಮಾಡುವ ಇಂಥಹ ತಪ್ಪುಗಳಿಂದ ಪೋಷಕರ ಇಮೇಜ್ ಗೆ ಧಕ್ಕೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ ಅವರು ಇದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ವರ್ತಿಸುತ್ತಾರೆ, ಅವರ ಅಹಂಕಾರದ ವರ್ತನೆ ಅವರನ್ನೇ ಹಾಳು ಮಾಡುತ್ತದೆ. ತಮ್ಮ ವಯಕ್ತಿಕ ಹಾಗೂ ಕೌಟುಂಬಿಕ ಜೀವನವನ್ನು ನಿರ್ಲಕ್ಷ್ಯಿಸುವ ರಾಜಕಾರಣಿಗಳು ಬಹಳ ಬೆಲೆ ತೆರಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ.ಮುಜಾಫರ್ ಅಸಾದಿ ಅಭಿಪ್ರಾಯ ಪಡುತ್ತಾರೆ. 
ಇಂಥಹ ಘಟನೆಗಳು ಕೇವಲ ರಾಜಕೀಯ ನಾಯಕರ ಘನತೆಗೆ ಧಕ್ಕೆ ತರುವುದು ಮಾತ್ರವಲ್ಲದೇ ಅವರ ಪಕ್ಷದ ಮೇಲೂ ಪರಿಣಾಮ ಬೀರುತ್ತೆ. ಸಾರ್ವಜನಿಕರ ಸ್ಮರಣಾ ಶಕ್ತಿ ಕಡಿಮೆ ಅವಧಿಯದ್ದು,(ಪಬ್ಲಿಕ್ ಮೆಮರಿ ಈಸ್ ಟೂ ಶಾರ್ಟ್) ಹೀಗಾಗಿ ಇಂಥ ಘಟನೆಗಳು ಮುಂಬರುವ ವಿಧಾನ ಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com