ಜನಾರ್ಧನ ರೆಡ್ಡಿಯನ್ನು ದೂರ ಇಟ್ಟಿದ್ದಕ್ಕೇ ಬಿಜೆಪಿಗೆ ಸೋಲು: ಸೋಮಶೇಖರ ರೆಡ್ಡಿ

ಬಿಜೆಪಿ ಜನಾರ್ಧನ ರೆಡ್ಡಿಯನ್ನು ಪಕ್ಷದಿಂದ ದೂರ ಇಟ್ಟಿದ್ದಕ್ಕೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಟಾಯಿತು ಎಂದು ರೆಡ್ಡಿ ಸಹೋದರ ಹಾಗೂ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಳ್ಳಾರಿ: ಬಿಜೆಪಿ ಜನಾರ್ಧನ ರೆಡ್ಡಿಯನ್ನು ಪಕ್ಷದಿಂದ ದೂರ ಇಟ್ಟಿದ್ದಕ್ಕೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಟಾಯಿತು ಎಂದು ರೆಡ್ಡಿ ಸಹೋದರ ಹಾಗೂ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಇಂದು ಬಳ್ಳಾರಿಯಲ್ಲಿ ನಡೆದ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೋಮಶೇಖರ ರೆಡ್ಡಿ ಅವರು, ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಜನರ್ಧನ ರೆಡ್ಡಿಯನ್ನು ಬಿಜೆಪಿ ನಾಯಕರು ಕಡೆಗಣಿಸಿದರು. ವಿನಾ ಕಾರಣ ಅವರನ್ನು ಪಕ್ಷದ ಚುನಾವಣಾ ಪ್ರಚಾರದಿಂದ ದೂರವಿಟ್ಟರು. ಅವರನ್ನು ಸರಿಯಾಗಿ ಬಳಸಿಕೊಂಡಿದ್ದರೆ ಖಂಡಿತವಾಗಿ ಬಿಜೆಪಿ ಅಧಿಕಾರಕ್ಕೆ ಬರುತಿತ್ತು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಅಂತೆಯೇ ಜನಾರ್ಧನ ರೆಡ್ಡಿ ಉಸ್ತುವಾರಿ ವಹಿಸಿಕೊಂಡಿದ್ದ ಮೊಳಕಾಲ್ಮೂರು ವಿಧಾನ ಸಭೆ ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇನ್ನು ಹಲವು ಕ್ಷೇತ್ರಗಳ ಉಸ್ತುವಾರಿಯನ್ನು ಅವರಿಗೆ ವಹಿಸಿದ್ದರೆ ಬಿಜೆಪಿ ಗೆಲ್ಲುತಿತ್ತು ಎಂಬುದು ನನ್ನ ಭಾವನೆಯಲ್ಲ. ಬಿಜೆಪಿ ಕಾರ್ಯಕರ್ತರು ಮತ್ತು ಪ್ರಜೆಗಳ ಭಾವನೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ನಿನ್ನೆ ಬೆಂಗಳೂರಿನಲ್ಲಿ ನಡೆದ ರೆಡ್ಡಿ ಸಮಾವೇಶದಲ್ಲೂ ಕೂಡ ಸೋಮಶೇಖರ ರೆಡ್ಡಿ ಈ ವಿಷಯ ಪ್ರಸ್ತಾಪ ಮಾಡಿ ಬಿಜೆಪಿ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು. 
ಇನ್ನು ಗಣಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದ ಗಾಲಿ ಜನಾರ್ಧನ ರೆಡ್ಡಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಅಲ್ಲದೆ ವಿಧಾನಸಭೆ ಚುನಾವಣೆ ವೇಳೆ ಮೊಳಕಾಲ್ಮೂರಿನಲ್ಲಿ ತಮ್ಮ ಆಪ್ತ ಬಿ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡಿದ್ದ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರೆಡ್ಡಿಯನ್ನು ಬಿಜೆಪಿಯಿಂದ ಹೊರಗಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com