ಮಗ್ಗುಲ ಮುಳ್ಳಾಗಲಿದ್ದಾರಾ ಟಿಕೆಟ್ ಆಕಾಂಕ್ಷಿಗಳು: ಬಂಡಾಯದ ಭೀತಿಯಲ್ಲಿ ಕಾಂಗ್ರೆಸ್!

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ತನ್ನ ಪಕ್ಷದ ಮುಖಂಡರು ಬಂಡಾಯವೆದ್ದು ಬೇರೆ ಪಕ್ಷಕ್ಕೆ ಸೇರುತ್ತಾರೆಂಬ ಭೀತಿಯಲ್ಲಿರುವ ಕಾಂಗ್ರೆಸ್ ...
ಪರಮೇಶ್ವರ್
ಪರಮೇಶ್ವರ್
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ತನ್ನ ಪಕ್ಷದ ಮುಖಂಡರು ಬಂಡಾಯವೆದ್ದು ಬೇರೆ  ಪಕ್ಷಕ್ಕೆ ಸೇರುತ್ತಾರೆಂಬ ಭೀತಿಯಲ್ಲಿರುವ ಕಾಂಗ್ರೆಸ್ ಕೊನೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಮೇ ಮೊದಲನೇ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ  ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ.
ಕಳೆದ ತಿಂಗಳು ಜೆಡಿಎಸ್ ತನ್ನ ಮೊದಲ ಹಂತದ ಪಟ್ಟಿ ರಿಲೀಸ್ ಮಾಡಿದೆ. ಶೀಘ್ರವೇ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. ಇನ್ನೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಕಾಂಕ್ಷಿಗಳ ಲಿಸ್ಟ್ ಯಾವಾಗಲು ಹೆಚ್ಚಾಗಿರುತ್ತದೆ, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಅವರು ಪಕ್ಷ ತೊರೆಯುವುದು, ಅಥವಾ ಬೇರೆ ಪಕ್ಷಕ್ಕೆ ಸೇರಿ ಸ್ಪರ್ಧಿಸುವುದು ನಮಗೆ ಇಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಪರಮೇಶ್ವರ್ ಹೇಳಿದ್ದಾರೆ,
ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಿದೆ, ಆಗ ನಮ್ಮ ಪಕ್ಷದಿಂದ ಟಿಕೆಟ್ ಸಿಗಲಿಲ್ಲವೆಂದು ಬೇರೆ ಪಕ್ಷಗಳಿಂದ ಸ್ಪರ್ಧಿಸಲು ಆಕಾಂಕ್ಷಿಗಳಿಗೆ ಅವಕಾಶ ಇರುವುದಿಲ್ಲ ಎಂಬುದು ಕಾಂಗ್ರೆಸ್ ತಂತ್ರವಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 1ಸಾವಿರ ಅರ್ಜಿಗಳು ಬಂದಿವೆ, ಈ ಅರ್ಜಿಗಳನ್ನು ಪಕ್ಷ  ಮೌಲ್ಯಮಾಪನ ಮಾಡಲಿದ್ದು, ವೀಕ್ಷಕರ ವರದಿ ಇನ್ನಿತರ ಅಂಶಗಳನ್ನು ಪರಿಗಣಿಸಿ ಜಯಗಳಿಸುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಪ್ರಕ್ರಿಯೆ ಮುಂದುವರಿದಿದೆ, ಈಗಾಗಲೇ ನಮ್ಮಲ್ಲಿ 124 ಶಾಸಕರಿದ್ದಾರೆ, ಅವರಿಗೆಲ್ಲಾ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂದು ಹವಣಿಸುತ್ತಿರುವ ಕಾಂಗ್ರೆಸ್ ಕೇಡರ್ ಮಟ್ಟದಲ್ಲಿ ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. 
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ ಅಮಿತ್ ಶಾ ಅವರಿಗೆ ತಿರುಗೇಟು ನೀಡಲು, ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇದೇ ವೇಳೆ ತಮ್ದೇ ಪಕ್ಷದ ಬಂಡಾಯ ಅಭ್ಯರ್ಥಿಗಳಿಂದ ಪಕ್ಷಕ್ಕೆ ಉಂಟಾಗುವ ಹಾನಿಯ ಬಗ್ಗೆಯೂ ಕಾಂಗ್ರೆಸ್ ಗೆ ಭಯವಿದೆ, ಹೀಗಾಗಿ ಬಂಡಾಯ ನಾಯಕರನ್ನು ಉತ್ತಮವಾಗಿ ನಿರ್ವಹಿಸಲು ಪಕ್ಷ ಒಂದು ತಂಡವನ್ನೇ ರಚಿಸಿದೆ.ಸ್ಥಳೀಯವಾಗಿ ಪ್ರಭಾವಶಾಲಿಯಾಗಿರುವ ನಾಯಕರನ್ನು ಈ ಕೆಲಸಕ್ಕೆ ನೇಮಿಸಲಾಗಿದೆ. ಗುಜರಾತ್ ನಲ್ಲೂ ಇದೇ ಮಾದರಿಯಲ್ಲಿ ಕೆಲಸ ಮಾಡಲಾಗಿದ್ದುಪ, ಈ ತಂತ್ರಗಾರಿಕೆ ಅಲ್ಲಿ ಉತ್ತಮ ಫಲಿತಾಂಶ ನೀಡಿತ್ತು. 
ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧೂಸೂಧನ್ ಮಿಸ್ತ್ರಿ ಅವರನ್ನೊಳಗೊಂಡ ಸ್ಕ್ರೀನಿಂಗ್ ಸಮಿತಿಯನ್ನು ರಾಹುಲ್ ಗಾಂಧಿ  ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com