'ವಿಷನ್ 2025' ದಾಖಲೆ ಬಿಜೆಪಿಯ ಚಾರ್ಜ್ ಶೀಟ್ ನಂತಲ್ಲ: ಸಿಎಂ ಸಿದ್ದರಾಮಯ್ಯ

ಭಾರತೀಯ ಜನತಾ ಪಾರ್ಟಿಯಿಂದ ನಡೆಯುತ್ತಿರುವ ಬೆಂಗಳೂರು ರಕ್ಷಿಸಿ ಅಭಿಯಾನವನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರನ್ನು ...
ನವ ಕರ್ನಾಟಕ ವಿಷನ್ 2025ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೆಲ್ಫಿಗೆ ಫೋಸ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನವ ಕರ್ನಾಟಕ ವಿಷನ್ 2025ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೆಲ್ಫಿಗೆ ಫೋಸ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು; ಭಾರತೀಯ ಜನತಾ ಪಾರ್ಟಿಯಿಂದ ನಡೆಯುತ್ತಿರುವ ಬೆಂಗಳೂರು ರಕ್ಷಿಸಿ ಅಭಿಯಾನವನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರನ್ನು ಕಸದ ನಗರವಾಗಿ ಮಾಡಿದವರೇ ಇಂದು ಬೆಂಗಳೂರು ರಕ್ಷಿಸಿ ಅಭಿಯಾನ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ನಾವು ಅಭಿವೃದ್ಧಿಕಾರ್ಯ ನಡೆಸುವಾಗ ಬಿಜೆಪಿಯವರಿಗೆ ಅಲ್ಲಿ ಲಂಚ, ಭ್ರಷ್ಟಾಚಾರದ ವಾಸನೆ ಏಕೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಬಹುಶಃ ಅವರ ಮೂಗನ್ನು ವಿಶೇಷವಾಗಿ ವಿನ್ಯಾಸ ಮಾಡಿರಬೇಕು ಎಂದು ಟೀಕಿಸಿದರು.

ನಿನ್ನೆ ಅವರು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರೊಂದಿಗೆ ನವ ಕರ್ನಾಟಕ ದೂರದೃಷ್ಟಿ 2025 ದಾಖಲೆಗಳನ್ನು ಬಿಡುಗಡೆಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಇಂದು ಹಲವು ವಲಯಗಳಲ್ಲಿ ಮುಂಚೂಣಿಯಲ್ಲಿದೆ. 2013ರಲ್ಲಿ ನೆರೆ ರಾಜ್ಯಗಳಿಗೆ ಹೋಲಿಸಿದರೆ ಅಂದು ಕರ್ನಾಟಕದಲ್ಲಿ ಅನೇಕ ಬಡವರ್ಗದ ಜನತೆಯಿದ್ದರು. ಇಂದು ಅವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.

ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಾಗ ನಾವು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದೇವೆ ಎಂದು ಬಿಜೆಪಿಯವರು ಟೀಕಿಸಿದರು. ವಾಸ್ತವವಾಗಿ ಈ ಬಿಜೆಪಿ ನಾಯಕರ ಹೊಟ್ಟೆ ತುಂಬಿದೆ, ಬಡವರ ಹಸಿವು ಅವರಿಗೆ ಅರ್ಥವಾಗುವುದಿಲ್ಲ ಎಂದರು.

2013ರಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನಾವು ರಾಜ್ಯದ ಜನತೆಗೆ 165 ಭರವಸೆಗಳನ್ನು ನೀಡಿದ್ದೆವು. ಅವುಗಳಲ್ಲಿ 155 ಈಡೇರಿವೆ. ನವ ಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಬುನಾದಿ ಹಾಕಿದ್ದು ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಇನ್ನಷ್ಟು ಇದೆ.

ನವಕರ್ನಾಟಕ ವಿಷನ್-2025 ದಾಖಲೆಗಳನ್ನು ನಾನು ಬಿಡುಗಡೆ ಮಾಡಿದ್ದು ಅವುಗಳನ್ನು ಜಾರಿಗೆ ತರಲು ಮುಂದಿನ ದಿನಗಳಲ್ಲಿ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ನಮ್ಮಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ದೂರದೃಷ್ಟಿಯಿದೆ. ಅದಕ್ಕಾಗಿ ನಾವು ವಿಷನ್ 2025ನ್ನು ಬಿಡುಗಡೆಮಾಡಿದ್ದೇವೆ. ಇದು ಇತ್ತೀಚೆಗೆ ಬಿಡುಗಡೆಯಾದ ಚಾರ್ಚ್ ಶೀಟ್ ನಂತಲ್ಲ ಎಂದು ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಚಾರ್ಚ್ ಶೀಟ್ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com