

ಮಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಯಾವ ಪಕ್ಷ ಗೆದ್ದರೂ ಕೂಡ ತಮ್ಮ ಬವಣೆಗಳನ್ನು ಬಗೆಹರಿಸಬಹುದು ಎಂಬ ಭರವಸೆಯಲ್ಲಿ ಮಂಗಳೂರಿನ ಮೀನು ಸಮುದಾಯದವರು ಇದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ರಾಜಕೀಯ ಕಾವು ಏರುತ್ತಿದ್ದು ಮೂರು ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಬಿಜೆಪಿ ಕೂಡ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಜೆಡಿಎಸ್ ಕೂಡ ಪೈಪೋಟಿ ನೀಡಲು ಮುಂದಾಗಿದೆ. ಮೀನುಗಾರ ಸಮುದಾಯ ಯಾರಿಗೆ ಮಣೆಹಾಕುತ್ತಾರೆ ಎಂದು ಕಾದುನೋಡಬೇಕಿದೆ.
ಕೆಲವು ಮೀನುಗಾರರು ಈಗಿನ ಸರ್ಕಾರದ ಮೇಲೆ ನಂಬಿಕೆಯಿಟ್ಟಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ತವ್ಯದ ವೇಳೆ ಮೃತಪಡುವ ಮೀನುಗಾರರ ಕುಟುಂಬಕ್ಕೆ 2ರಿಂದ 6 ಲಕ್ಷಕ್ಕೆ ಏರಿಕೆ ಮಾಡಿರುವುದು ಮೀನುಗಾರರಲ್ಲಿ ತೀವ್ರ ಸಂತಸ ತಂದಿದೆ.
ಕೆಲವು ಮೀುನುಗಾರರು ಭಾರತೀಯ ಜನತಾ ಪಾರ್ಟಿಗೆ ಮತ ಹಾಕುವ ಆಶಯ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು ಎಂಬ ಆಶಯ ಅವರದ್ದು.
ಸರ್ಕಾರ ಸಬ್ಸಿಡಿ ನೀಡಿದರೆ ಮತ್ತು ಡೀಸೆಲ್ ಬೆಲೆ ಇಳಿಕೆಯಾದರೆ ತಮಗೆ ಸಹಾಯವಾಗಬಹುದು ಎಂಬ ಆಸೆಯಲ್ಲಿ ಮೀನುಗಾರರಿದ್ದಾರೆ. ಯಾವ ಸರ್ಕಾರ ತಮಗೆ ಸಹಾಯ ಮಾಡುತ್ತದೆಯೋ ಅದಕ್ಕೆ ಮತ ಚಲಾಯಿಸುತ್ತೇವೆ ಎನ್ನುತ್ತಾರೆ ಕೆಲ ಮೀನುಗಾರರು.
ಮೀನುಗಾರಿಕೆಯ ಅಭಿವೃದ್ಧಿಗೆ ಅಧಿಕ ಪ್ರಮಾಣದಲ್ಲಿ ಹಣ ಬೇಕಾಗಿರುವುದರಿಂದ ಭಾರತ ಸರ್ಕಾರ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಮಾಡಬೇಕೆಂದು ಮೀನುಗಾರರ ಬೇಡಿಕೆಯಾಗಿದೆ ಎನ್ನುತ್ತಾರೆ ರಾಜ್ಯ ಮೀನುಗಾರಿಕೆ ಖಾತೆ ಸಚಿವ ಪ್ರಮೋದ್ ಮಧ್ವರಾಜ್.
ಕರಾವಳಿ ಜಿಲ್ಲೆಯ 19 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 13, ಬಿಜೆಪಿಯ 3 ಮತ್ತು ಸ್ವತಂತ್ರ ಅಭ್ಯರ್ಥಿಗಳು ಮೂವರಿದ್ದು ಈ ಬಾರಿಯ ಚುನಾವಣೆಯಲ್ಲಿ ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.
Advertisement