ಮಠದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದು ಸರಿಯೇ?: ಪ್ರಧಾನಿ ಮೋದಿಗೆ ಮುತಾಲಿಕ್ ಪ್ರಶ್ನೆ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮಠದಲ್ಲಿ ಇಫ್ತಾರ್ ಕೂಡ ಆಯೋಜನೆ ಮಾಡಿದ್ದು ಸರಿಯೇ? ಎಂಬ ಪ್ರಶ್ನೆಗೆ ಮೊದಲು ಉತ್ತರ ನೀಡಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಒತ್ತಾಯಿಸಿದ್ದಾರೆ...
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ರಾಯಚೂರು: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮಠದಲ್ಲಿ ಇಫ್ತಾರ್ ಕೂಡ ಆಯೋಜನೆ ಮಾಡಿದ್ದು ಸರಿಯೇ? ಎಂಬ ಪ್ರಶ್ನೆಗೆ ಮೊದಲು ಉತ್ತರ ನೀಡಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಒತ್ತಾಯಿಸಿದ್ದಾರೆ. 
ಪ್ರಧಾನಿ ಮೋದಿ ರಾಜ್ಯ ಪ್ರವಾಸ ಕುರಿತಂತೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಂಜಾನ್ ಮಾಸದ ಕೊನೆಯ ಉಪವಾಸವನ್ನು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋಜನೆ ಮಾಡಲಾಗಿತ್ತು. ಮಠದಲ್ಲಿ ಇಫ್ತಾರ್ ಕೂಟವನ್ನೇಕೆ ಆಯೋಜನೆ ಮಾಡಲಾಗಿತ್ತು. ಮುಸ್ಲಿಮರ ಮಸೀದಿಯಲ್ಲಿಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡುತ್ತಾರೆಯೇ?... ಅಲ್ಪಸಂಖ್ಯಾತರ ಮನವೊಲಿಸಲು ಕಾಂಗ್ರೆಸ್ ಯತ್ನ ನಡೆಸುತ್ತಿರುತ್ತದೆ ಎಂದು ಪದೇ ಪದೇ ಬಿಜೆಪಿ ಆರೋಪ ಮಾಡುತ್ತದೆ. ಇದೇ ತಂತ್ರವನ್ನು ಇದೀಗ ಬಿಜೆಪಿ ಕೂಡ ಅನುಸರಿಸುತ್ತಿದೆ. ಹಿಂದುತ್ವ ರಕ್ಷಕ ಎಂಬ ಹೆಸರು ಪಡೆದಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಹೇಳಿದ್ದಾರೆ. 
ಹಿಂದುತ್ವದ ಪ್ರತೀಕವೆಂದೇ ಹೇಳಲಾಗುತ್ತಿದ್ದ ಪ್ರವೀಣ್ ತೊಗಾಡಿಯಾ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರನ್ನು ಹೊರಹಾಕಲಾಯಿತು. ಹಿಂದುತ್ವಕ್ಕಾಗಿ ತೊಗಾಡಿಯಾ ತಮ್ಮ ಭವಿಷ್ಯ ಹಾಗೂ ಕುಟುಂಬವನ್ನೇ ತ್ಯಾಗ ಮಾಡಿ, ಆರ್'ಎಸ್ಎಸ್'ಗಾಗಿ ದುಡಿದರು. ಇದರ ಪ್ರತಿಯಾಗಿ ಅವರಿಗೆ ಏನು ಸಿಕ್ಕಿತು?... ಬಿಜೆಪಿ ಡೋಂಗಿ ಹಿಂದುತ್ವ ವಾದವನ್ನು ಅನುಸರಿಸುತ್ತಿದೆ. 
ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷಗಳಾಯಿತು. ಆದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ವಿಫಲವಾಗಿದೆ. ಮತಗಳನ್ನು ಸೆಳೆಯುವ ಸಲುವಾಗಿ ವಿವಾದ ಜೀವಂತವಾಗಿರಬೇಕೆಂದು ಬಿಜೆಪಿ ಬಯಸುತ್ತಿದೆ. ಬಿಜೆಪಿಯ ಕುತಂತ್ರದಿಂದ ತೊಗಾಡಿಯಾ ಅವರು ಸಾಕಷ್ಟು ನೊಂದಿದ್ದಾರೆಂದು ತಿಳಿಸಿದ್ದಾರೆ. 
ಇದೇ ವೇಳೆ ಬಿಜೆಪಿ ಮತಹಾಕಬೇಡಿ ಎಂದು ಜನತೆಗೆ ಕರೆನೀಡಿರುವ ಅವರು ಶಿವಸೇನೆಗೆ ಮತಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. 5 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಸೇನೆ 2ರಲ್ಲಿ ಗೆಲವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಅವರು, ರೊಹಿಂಗ್ಯಾ ಮುಸ್ಲಿಮರು ಹಾಗೂ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಯಾವಾಗ ಹಿಂದಿರುವಂತೆ ಮಾಡುತ್ತೀರಿ ಎಂದು ಬಿಜೆಪಿಗೆ ಪ್ರಶ್ನೆ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com