
ಬೆಂಗಳೂರು: ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಮತದಾನ ಮತ್ತು ಮತ ಎಣಿಕೆ ದಿನ ಮದ್ಯ ಮಾರಾಟ ಮತ್ತು ಸಂಗ್ರಹಕ್ಕೆ ನಿಷೇಧ ಹೇರಿ ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.
ಇದರಿಂದಾಗಿ ಮೇ 12ರಿಂದ ಮೇ 15ರ ಮಧ್ಯರಾತ್ರಿಯವರೆಗೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಪಬ್, ಬಾರ್ ಗಳು ಮುಚ್ಚಲಿವೆ. ಈ ಮಧ್ಯೆ ಮನೆಗೆ ತಂದು ಎಷ್ಟು ಬೇಕಾದರೂ ಮದ್ಯವನ್ನು ಸೇವಿಸಬಹುದು. ಸಾರ್ವಜನಿಕರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ನೀಡಬಾರದಷ್ಟೆ ಎಂದು ಪೊಲೀಸರು ಹೇಳಿದ್ದಾರೆ.
ಮತದಾನದ ಸಂದರ್ಭದಲ್ಲಿ ಸಮಾಜ ವಿರೋಧಿ ಅಂಶಗಳು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿರುವುದರಿಂದ ಗಲಭೆ ನಡೆಯಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ಮತ್ತು ಸಂಗ್ರಹಕ್ಕೆ ನಿಷೇಧ ಹೇರಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಮತದಾನ ಮತ್ತು ಮತಎಣಿಕೆ ದಿನಗಳಲ್ಲಿ ಮದ್ಯ ಮಾರಾಟ, ಸಂಗ್ರಹಣೆ, ಚಿಲ್ಲರೆ ಮತ್ತು ಸಗಟು ಮಾರಾಟವನ್ನು ನಿಷೇಧಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ಪರಿಧಿಯಲ್ಲಿರುವ ಮದ್ಯ ಮಾರಾಟ ಮಳಿಗೆ, ಹೊಟೇಲ್, ರೆಸ್ಟೋರೆಂಟ್ ಗಳನ್ನು ಮುಚ್ಚಲಾಗುವುದು ಎಂದು ಹೇಳಿದ್ದಾರೆ.
ಆದರೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಮದ್ಯ ಸೇವಿಸುವುದಕ್ಕೆ ಯಾವುದೇ ನಿಷೇಧವಿಲ್ಲ. ರಸ್ತೆಗಿಳಿದು ಗಲಭೆ, ಗದ್ದಲವೆಬ್ಬಿಸಬಾರದು. ತಮ್ಮ ಮನೆಗಳಿಗೆ ಸ್ನೇಹಿತರು, ಅತಿಥಿಗಳನ್ನು ಆಹ್ವಾನಿಸಿ ಪಾರ್ಟಿ ನಡೆಸಬಹುದು. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮನೆಗೆ ಎಷ್ಟು ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement